ಎಪಿಎಲ್ ಕಾರ್ಡ್ದಾರರಿಗೂ ಪಡಿತರ ನೀಡಲು ಒತ್ತಾಯ
ತಿಪಟೂರು: ಬಿಪಿಎಲ್ ಫಲಾನುಭವಿಗಳಿಗೆ ನೀಡುವ ಪಡಿತರವನ್ನು ಎಪಿಎಲ್ ಕಾರ್ಡ್ದಾರರಿಗೂ ವಿತರಿಸಬೇಕೆಂದು ಎಪಿಎಂಸಿ ಸದಸ್ಯ ಬಿ.ಬಿ. ಸಿದ್ದಲಿಂಗಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿಕೊಂಡಿದ್ದು, ಕೊಬ್ಬರಿ ಬೆಲೆ ಬಿದ್ದು ಹೋಗಿದೆ. ತೆಂಗಿಗೆ ಕಳೆದ ಹತ್ತಾರು ವರ್ಷಗಳಿಂದ ನುಸಿಪೀಡೆ, ಬೆಂಕಿರೋಗ, ರಸಸೋರುವ ರೋಗ ಸೇರಿದಂತೆ ಒಂದಲ್ಲ ಒಂದು ರೋಗಗಳು ಬಿಟ್ಟೂ ಬಿಡದೆ ಪೀಡಿಸುತ್ತಿವೆ. ಜೊತೆಗೆ ಕಾಲಕಾಲಕ್ಕೆ ಮಳೆಯೂ ಇಲ್ಲದ್ದರಿಂದ ಅಂತರ್ಜಲದ ಮಟ್ಟ ಸಾವಿರ ಅಡಿಗೆ ಕುಸಿದು ಹೋಗಿದ್ದು, ವಿದ್ಯುತ್ ಸಮಸ್ಯೆ ವಿಪರೀತವಾಗಿ ನೀರುಣಿಸಲು ಕಷ್ಟವಾಗಿರುವುದರಿಂದ ತೆಂಗು ಮತ್ತು ಅಡಿಕೆ ಅಳಿವಿನಂಚಿಗೆ ತಲುಪಿ ಬೆಳೆಗಾರರು ನಿರಂತರ ನಷ್ಠಕ್ಕೊಳಗಾಗುತ್ತಿದ್ದಾರೆ. ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಕಸಾಯಿಖಾನೆಗೆ ಕೇಳಿದಷ್ಟು ಬೆಲೆಗೆ ಮಾರುವಂತಾಗಿದ್ದು, ರೈತರು ಬೇರೆ ಕಡೆ ವಲಸೆಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಅನುಭವಿಸುವ ಹಕ್ಕನ್ನು ಕೊಟ್ಟಿರುವ ಸರ್ಕಾರ, ಎಪಿಎಲ್ ಕಾರ್ಡ್ದಾರರಿಗೂ ಅವುಗಳ ಸೌಲಭ್ಯ ದೊರೆಯುವಂತೆ ಮಾಡುವ ಮೂಲಕ ಎಲ್ಲಾ ರೈತರ ಹಿತ ಕಾಯಬೇಕೆಂದು ಸಿದ್ದಲಿಂಗಮೂರ್ತಿ ಮನವಿ ಮಾಡಿದ್ದಾರೆ.