ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ಷೀರಭಾಗ್ಯ ಯೋಜನೆ ಸಹಕಾರಿ: ಮಹೇಶ್
ಕೊರಟಗೆರೆ: ಸಂಪೂರ್ಣ ಪೌಷ್ಟಿಕ ಆಹಾರವಾಗಿರುವ ಹಾಲು ನೀಡುವುದರ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ಜಾರಿಗೆ ತಂದಿರುವ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಸಹಕಾರಿಯಾಗಿದ್ದು ಇದರ ಸದುಪಯೋಗ ಪಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್. ಮಹೇಶ್ ತಿಳಿಸಿದರು.
ಅವರು ಪಟ್ಟಣದ ಬೋವಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿ ಇಂದು ಬಡತನದಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಅತ್ಯಗ್ಯವಾಗಿ ಬೇಕಾದ ಪೌಷ್ಟಿಕಾಂಶವಿರುವ ಆಹಾರ ದೂರೆಯದೆ ಅಪೌಷ್ಟಿಕತೆಯಿಂದ ಬಳಲುತಿದ್ದು ಸರ್ಕಾರ ಮಕ್ಕಳಲ್ಲಿ ಪೌಷ್ಟಿಕಾಂಶವಿರುವ ಮಧ್ಯಾಹ್ನ ದ ಬಿಸಿ ಊಟ ದೊಂದಿಗೆ ಹಾಲು ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದು ಇದರಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಶಿಶು ಅಭಿವೃದ್ದಿ ಯೋಜನಾದಿಕಾರಿ ಹೊನ್ನೇಶಪ್ಪ ಮಾತನಾಡಿ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು ಕೊರಟಗೆರೆ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಸುಮಾರು 10,500 ಮಕ್ಕಳು ವಾರದಲ್ಲಿ 3 ದಿನಗಳು ಇದರ ಸದುಪಯೋಗ ಪಡೆದು ಕೊಳ್ಳುತ್ತಿದ್ದು ಈಗಾಗಲೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿಯನ್ನು ಸರಬರಾಜು ಮಾಡಲಾಗಿದ್ದು ಪ್ರತಿ ಮಗುವಿಗೆ ದಿನಕ್ಕೆ 15 ಗ್ರಾಂ ನಂತೆ 150 ಮಿ.ಲೀ ಕೆನೆಭರಿತ ಹಾಲು ತಯಾರಿಸಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.