ವಿದ್ಯಾರ್ಥಿ ಜೀವನ ಅಮೂಲ್ಯ: ಡಾ. ಪರಮಶಿವಮೂರ್ತಿ
ತಿಪಟೂರು.ಆ.7: ವಿದ್ಯಾರ್ಥಿ ಜೀವನವೆಂಬುದು ಪವಿತ್ರ ಹಾಗೂ ಅಮೂಲ್ಯವಾದದ್ದು, ಕಠಿಣ ಪರಿಶ್ರಮದೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಸಾರ್ಥಕ ಬದುಕನ್ನು ಸಾಗಿಸಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಡಿ.ವಿ. ಪರಮಶಿವಮೂರ್ತಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಎಸ್.ವಿ.ಪಿ ಕಾಲೇಜು ಹಾಗೂ ಸುಮತಿ ಬಾಲಿಕಾ ಪ್ರೌಢಶಾಲೆಗಳ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಸಂಘಗಳು ಮೊದಲು ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಅಸ್ತಿತ್ವದಲ್ಲಿದ್ದು, ಅನ್ಯಾಯಗಳು, ಅಕ್ರಮಗಳು ನಡೆದಾಗ ಪ್ರತಿಭಟನೆಯನ್ನು ಮಾಡುತ್ತಾ ನ್ಯಾಯಕ್ಕಾಗಿ ಹೋರಾಡಿ ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಆದರೆ ಇಂದು ವಿದ್ಯಾರ್ಥಿ ಸಂಘಗಳು ಪ್ರೌಢಶಾಲೆಗಳಲ್ಲಿಯೇ ರೂಪುಗೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಸಂಘದ ಹೆಸರಲ್ಲಿ ಸಹಕಾರ ಸಂಘ ಸಂಸ್ಥೆಗಳು ಪ್ರಾರಂಭವಾಗಿವೆ. ಶಿಕ್ಷಣದ ಲಾಭ ಪಡೆದು ಸಾಮಾಜಿಕ ಸೇವೆಗಳಿಗೂ ಈ ಸಂಘಗಳ ಶಕ್ತಿ ಬಳಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಕೆ. ಷಡಕ್ಷರಿ ಮಾತನಾಡಿ ಸರ್ಕಾರ ಇಂದು ಅನೇಕ ಅನುಕೂಲಕರ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಅದರ ಲಾಭವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಿದರೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತುಕೊಟ್ಟಂತಾಗುತ್ತದೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಮತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಮಲ್ಲಿಕಾರ್ಜುನಯ್ಯ ಮಕ್ಕಳು ಬೆಳೆಯುವ ಸಸಿಗಳಂತೆ. ಅವುಗಳಿಗೆ ಸರಿಯಾದ ಸಮಯದಲ್ಲಿ ನೀರು ಗೊಬ್ಬರ ಹಾಕಿ ಬೆಳೆಸಿ ಹೆಮ್ಮರಗಳನ್ನಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ಪ್ರಾಂಶುಪಾಲ ಹೆಚ್.ಎಲ್. ಜಯದೇವಪ್ಪ, ಸುಮತಿ ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾಕ್ಷಮ್ಮ, ಹಿರಿಯ ಶಿಕ್ಷಕ ಹಾಲಪ್ಪ, ವಕೀಲ ಕೆ.ಎಸ್. ಸದಾಶಿವಯ್ಯ, ನಿವೃತ್ತ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಮತ್ತಿತರರಿದ್ದರು. ಕನ್ನಡ ಉಪನ್ಯಾಸಕ ಕೆ.ಎನ್. ರೇಣುಕಯ್ಯ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ವಿದ್ಯಾರ್ಥಿಗಳಾದ ಶಶಾಂಕ್ ಪ್ರಾರ್ಥಿಸಿ, ಉಲ್ಲಾಸ್ ಸ್ವಾಗತಿಸಿ, ಲಿಖಿತ ಗುಣಶ್ರೀ ನಿರೂಪಿಸಿ, ಹರ್ಷಿತ ಸಹನ ವಂದಿಸಿದರು.