ಸಂಸ್ಕಾರ ಭಾರತಿಯಿಂದ ಸಾಧಕರಿಗೆ ಸನ್ಮಾನ
ಕ.ಪ್ರ.ವಾರ್ತೆ ತುಮಕೂರು ಆ. 7
ಇಲ್ಲಿನ ಶೃಂಗೇರಿ ಶಂಕರ ಮಠದ ಸಭಾ ಭವನದಲ್ಲಿ ಸಂಸ್ಕಾರ ಭಾರತಿ ತುಮಕೂರು ಶಾಖೆಯಿಂದ ಗಮಕ ಭಾರತಿ ಚಾರಿಟಬಲ್ ಟ್ರಸ್ಟ್ನ ಸಹಯೋಗದೊಂದಿಗೆ 5 ಜನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಲಾಯಿತು.
ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಶಕ್ತಿಯೇ ಜೀವನ. ನಾವು ಶಕ್ತಿವಂತರಾಗದೇ ಶಕ್ತ ಸಮಾಜ ಕಟ್ಟಲು ಸಾಧ್ಯವಿಲ್ಲ. ಹಿಂದಿನ ಉಪನಿಷತ್ಗಳಲ್ಲಿ ಶಕ್ತಿಯ ಸಂದೇಶವಿದೆ. ದೇವಾನುದೇವತೆಗಳು ಸಹ ಬಲಿಷ್ಠವಾದ ಪ್ರಾಣಿಗಳನ್ನೇ ತಮ್ಮ ವಾಹನ ಮಾಡಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ. ಯಾರು ಇತರರಿಗಾಗಿ ಬದುಕುತ್ತಾರೋ ಅವರೇ ಶಿಲ್ಪಿಗಳು. ಉಳಿದವರು ಬದುಕಿದರು ಶವದಂತೆ ಎಂದರು.
ಭಾರತದ ಇತಿಹಾಸವನ್ನು ಭಾರತೀಯರೆ ಬರೆಯಬೇಕು. ಇತರರು ತಮ್ಮ ಮೌಲ್ಯಗಳನ್ನು ತಿರುಚಿ ಬರೆಯುತ್ತಿದ್ದಾರೆ. ಪ್ರಜ್ಞಾವಂತ ಸಮಾಜ ಇಂತಹ ಮನ-ಸ್ಥಿತಿಗಳನ್ನು ದೂರವಿಟ್ಟರೆ ಒಳಿತು. ಕರ್ತವ್ಯ ಎಂದರೇ ಧರ್ಮ ಎಂದರು. ಇಂದು ಯುವಕರಲ್ಲಿ ಆತ್ಮವಿಶ್ವಾಸವೇ ಇಲ್ಲವಾಗಿದೆ. ಆಧುನಿಕ ಜಗತ್ತಿನ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದಾರೆ. ಭಾರತೀಯ ಸಂಸ್ಕೃತಿ ಕಲೆ, ವ್ಯಕ್ತಿ ವಿಕಸನದ ಪರಿಚಯದ ಅಗತ್ಯ ಇಂದಿನ ಶಿಕ್ಷಣಗಳಲ್ಲಿ ಪಠ್ಯ ವಿಷಯವಾಗಿ ಬಂದರೆ ಯುವ ಜನರು ಸಾತ್ವಿಕ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ದೇಶದ ಅವನತಿಗೆ ಸಾಮಾನ್ಯ ಜನರನ್ನು ನಿರ್ಲಕ್ಷಿಸಿದ್ದು ಮಹಿಳೆಯರನ್ನು ಅಪಮಾನಗೊಳಿಸಿದ್ದು ದುರಂತ ಎಂದು ತಿಳಿಸಿದರು.
ಸಂಸ್ಕಾರ ಭಾರತೀಯ ಪ್ರಾಂತ್ಯ ಸಂಘಟನಾ ಮಂತ್ರಿ ಚಂದ್ರಶೇಖರ ಶೆಟ್ಟಿ ಮಾತನಾಡಿ ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದರ ಬಗ್ಗೆ ವಿಷಾದಿಸಿದರು. ಈ ಹಿನ್ನೆಲೆಯಲ್ಲಿ ಸಂಸ್ಕಾರ ಭಾರತೀ ಭಾರತೀಯ ಮೌಲ್ಯಗಳನ್ನು ಪುನರ್ ಜೀವನಗೊಳಿಸುತ್ತಿದೆ ಎಂದರು.
ಸುಮಾರು ಸಾವಿರಕ್ಕೂ ಹೆಚ್ಚು ಸೇರಿದ್ದ ಸಮಾರಂಭದಲ್ಲಿ ಸೀಬಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಶಿಲ್ಪಿ ಶೇಕ್ ಮೊಹಮದ್ ಜಾನ್ ಮತ್ತು ಶಸ್ತ್ರ ಚಿಕಿತ್ಸಕ ವೈದ್ಯ ಡಾ. ಹಂಪಣ್ಣ, ಸೂಲಗಿತ್ತಿ ನರಸಮ್ಮ, ಹೆಚ್.ಆರ್. ಜಯಣ್ಣ ಮುಂತಾದವರು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಬರಿ ನೃತ್ಯ ರೂಪಕವನ್ನು ಮಂಗಳೂರಿನ ಸನಾತನ ನಾಟ್ಯಾಲಯದ ತಂಡ ನಡೆಸಿಕೊಟ್ಟಿತು. ನೃತ್ಯ ತಂಡದ ರೂವಾರಿಗಳಾದ ಲತಾ ನಾಗರಾಜ್ ಅವರು ಶಬರಿ ಪಾತ್ರವನ್ನು ಅದ್ಭುತವಾಗಿ ಮಾಡಿ ಪ್ರೇಕ್ಷಕರ ಮನ ಸೆಳೆದರು. ನಾ. ವೆಂಕಟೇಶ್ ಜೋಯಿಸ್ ನಿರೂಪಿಸಿದರು.