ಸಮರ್ಪಕ ಆನ್ಲೈನ್ ವ್ಯವಸ್ಥೆ ಕೈಗೊಳ್ಳುವಂತೆ ಆಗ್ರಹ
ಕುಣಿಗಲ್: ಅಸರ್ಮಪಕ ಆನ್ಲೈನ್ ಸೇವಾ ವ್ಯವಸ್ಥೆಯಿಂದ ಗ್ರಾಹಕರಿಗೆ ಬಹಳಷ್ಟು ಅನಾನುಕೂಲವಾಗುತ್ತಿದ್ದು, ಸಮರ್ಪಕ ಆನ್ಲೈನ್ ವ್ಯವಸ್ಥೆ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಹಕರು, ಗುತ್ತಿಗೆದಾರರು ಬೆಸ್ಕಾಂ ತಾಂತ್ರಿಕ ವಿಭಾಗದ ಕಚೇರಿಗೆ ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಕುಣಿಗಲ್ ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿನ ಕಸಬಾ ಹೋಬಳಿ ವ್ಯಾಪ್ತಿಯ ಬೆಸ್ಕಾಂ ಸೇವೆಗಳನ್ನು ಆನ್ಲೈನ್ ವ್ಯವಸ್ಥೆಯ ಮೂಲಕ ನಿರ್ವಹಣೆ ಮಾಡಲು ಕಳೆದೊಂದು ತಿಂಗಳಿನಿಂದ ಖಾಸಗಿ ವಿದ್ಯುನ್ಮಾನ ಸಂಸ್ಥೆಗೆ ವಹಿಸಲಾಗಿತ್ತು. ಸದರಿ ಸಂಸ್ಥೆಯು ಸಮರ್ಪಕ ನಿರ್ವಹಣೆಯ ವ್ಯವಸ್ಥೆ ಮಾಡುವಲ್ಲಿ ವಿಫಲವಾದ ಕಾರಣ ಇಲಾಖೆಯ ಹಲವು ಕೆಲಸ ಕಾರ್ಯಗಳಿಗೆ ತೊಂದರೆಯಾಗಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ, ಇತರೆ ಬೆಸ್ಕಾಂ ಸೇವೆಗಳನ್ನು ಪಡೆಯುವ ಗ್ರಾಹಕರಿಗೆ ಮತ್ತು ಗ್ರಾಹಕರ ವಿವಿಧ ಕಾಮಗಾರಿ ನಿರ್ವಹಣೆ ಮಾಡಲು ಗುತ್ತಿಗೆ ಪಡೆದ ಅನುಮತಿ ಪಡೆದ ಗುತ್ತಿಗೆದಾರರಿಗೂ ತೀವ್ರ ತೊಂದರೆಯಾಗಿತ್ತು.
ಸದರಿ ವ್ಯವಸ್ಥೆ ಸರಿಪಡಿಸುವವರೆಗೂ ಈ ಹಿಂದೆ ಕೈಬರಹದ ಮೂಲಕ ನಿರ್ವಹಿಸಲಾಗುತ್ತಿದ್ದ ವ್ಯವಸ್ಥೆಯನ್ನು ಮುಂದುವರೆಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ, ಗ್ರಾಹಕರು, ಗುತ್ತಿಗೆದಾರರು ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನ ವಾಗದೆ, ಬೆಸ್ಕಾಂ ಸೇವೆಗಳನ್ನು ನಿಗದಿತ ಅವಧಿಯೊಳೆಗ ಪಡೆಯುವಲ್ಲಿ ಗ್ರಾಹಕರು ಹಾಗೂ ಗುತ್ತಿಗೆದಾರರು ಪರದಾಡುವಂತ ಸ್ಥಿತಿಗೆ ಬಂದಿದ್ದು, ಬುಧವಾರ ಪಟ್ಟಣ ಸೇರಿದಂತೆ ಕಸಬಾ ಹೋಬಳಿಯ ಗ್ರಾಮಾಂತರ ಪ್ರದೇಶದ ಗ್ರಾಹಕರಾದ ರಾಜಣ್ಣ, ಕೃಷ್ಣಪ್ಪ, ರಾಮಣ್ಣ ಇತರರು, ಕಳೆದ ಹಲವು ದಿನಗಳಿಂದ ಅಲೆದು, ಅಲೆದು ರೋಸಿಹೋದ ಕಾರಣ, ಬುಧವಾರ ಆನ್ಲೈನ್ ವ್ಯವಸ್ಥೆ ಸರಿ ಪಡಿಸುವಂತೆ ಆಗ್ರಹಿಸಿ ತಾಂತ್ರಿಕ ವಿಭಾಗದ ಕೊಠಡಿಗೆ ಬೀಗ ಜಡಿದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ಗ್ರಾಹಕರ ಪ್ರತಿಭಟನೆಗೆ ಗುತ್ತಿಗೆದಾರರು ಸಹ ಬೆಂಬಲಿಸಿದರು.
ಗ್ರಾಹಕರು, ಗುತ್ತಿಗೆದಾರರ ಪ್ರತಿಭಟನೆ ವಿಷಯ ತಿಳಿದ ಬೆಸ್ಕಾಂನ ಮೇಲಾಧಿಕಾರಿಗಳು ಕೂಡಲೆ ತಾಂತ್ರಿಕ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಮೂವರು ಸಿಬ್ಬಂದಿಗಳನ್ನು ನಿಯೋಜಿಸಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.