ಕೊಲೆ ಬೆದರಿಕೆ ಪತ್ರ ನಕ್ಸಲರದಲ್ಲ: ಮಂಜುನಾಥ್
ಪಾವಗಡ: ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ನಕ್ಸಲರ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದ್ದು ಅದು ನಿಜವಾದ ನಕ್ಸಲರ ಕೆಲಸ ಅಲ್ಲವೆಂದು ಯುವ ಮುಖಂಡ ಕೆ.ಟಿ.ಹಳ್ಳಿ ಮಂಜುನಾಥ್ ತಿಳಿಸಿದ್ದಾರೆ. ಅವರು ಸುದ್ಧಿಗಾರರೊಂದಿಗೆ ಮಾತನಾಡಿ ನಕ್ಸಲರು ಅವರದೇ ಆದ ತತ್ವ ಸಿದ್ಧಾಂತ ಸೇರಿದಂತೆ ಸೈದ್ಧಾಂತಿಕ ನೆಲೆಗೆಟ್ಟಿನ ಆಧಾರದ ಮೇಲೆ ನಡೆಯುವವರು. ಅಲ್ಲದೇ ಬಡವ ಹಾಗೂ ಶೋಷಿತರ ಪರ ಮಾತನಾಡುವ ವವರು. ಗೊಂದಲ ಸೃಷ್ಟಿಸುವ ಹಿನ್ನೆಲೆಯಲ್ಲಿ ರಾಮಕೃಷ್ಣ ಎಂಬುವರ ಹೆಸರಿನಲ್ಲಿ ಯಾರೋ ಈ ರೀತಿ ಶಾಸಕರಿಗೆ ಕೊಲೆ ಬೆದರಿಕೆ ಪತ್ರ ಬರೆದಿರಬಹುದು ಎಂಬ ಅನುಮಾನ ಉಂಟಾಗಿದೆ ಎಂದು ಅವರು ತಿಳಿಸಿದರು. ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರಿಗೆ ಶತ್ರುಗಳು ಇಲ್ಲ. ಸರಳ ಸಜ್ಜನಿಕೆಗೆ ಹೆಸರಾದ ಕೆ.ಎಂ.ತಿಮ್ಮರಾಯಪ್ಪ ಅವರು ಈಗಲೂ ಬಡವರ ಪರವಾಗಿ ಕೆಲಸ ಮಾಡುವವರು. ತಾ.ಅಭಿವೃದ್ಧಿ ಸೇರಿದಂತೆ ಜನಪರ ಕೆಲಸಗಳ ಬಗ್ಗೆ ಮಾತ್ರ ಅವರಿಗೆ ಅಪಾರ ಆಸಕ್ತಿ. ಏನೇ ಆದರೂ ಯಾವುದನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ಶಾಸಕರಿಗೆ ಪೊಲೀಸ್ ರಕ್ಷಣೆ ಅವಶ್ಯಕತೆ ಇದೆ ಎಂದ ಅವರು ವಿನಾಕಾರಣ ಗೊಂದಲಗಳನ್ನು ಸೃಷ್ಟಿಸಬೇಡಿ. ಸಮಸ್ಯೆಗಳಿದ್ದರೆ ಶಾಸಕರೊಂದಿಗೆ ಮಾತನಾಡಿ ಈಡೇರಿಸಿಕೊಳ್ಳಿ. ತಾ.ಜನತೆಯ ಬಗ್ಗೆ ಕಾಳಜಿಯುಳ್ಳ ಅವರಿಗೆ ಸ್ಪಂದಿಸಿ ಕೆಲಸ ಮಾಡುವ ಗುಣ ಇದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಆದಿಲಕ್ಷ್ಮಿ ನಗರದಲ್ಲಿ ನೀರಿಗೆ ಹಾಹಾಕಾರ
ತಿಪಟೂರು: ತಾಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆದಿಲಕ್ಷ್ಮಿನಗರದಲ್ಲಿ ಕಳೆದ 25 ದಿನಗಳಿಂದ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಆದಿಲಕ್ಷ್ಮಿನಗರದಲ್ಲಿ ಬಡ ನೇಕಾರರೇ ವಾಸ ಮಾಡುತ್ತಿದ್ದು, ಇಲ್ಲಿ ಒಂದೇ ಒಂದು ಕೊಳವೆ ಬಾವಿ ಇದ್ದು ಇದರಲ್ಲಿ ನೀರಿದ್ದರೂ ಸಹ ಸಮರ್ಪಕ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮಾಡಿಲ್ಲ. ಇಲ್ಲಿನ ಜನತೆ ಅಣ್ಣಾಪುರ, ಹಳೇಪಾಳ್ಯ, ಹುಚ್ಚನಹಟ್ಟಿಯಿಂದ ನೀರನ್ನು ತರುವಂತಾಗಿದ್ದು, ಕೆಲವರು ಟ್ಯಾಂಕರ್ ಮೂಲಕ ನೀರನ್ನು ಖರೀದಿಸುತ್ತಿದ್ದಾರೆ. ನೀರಿಗಾಗಿ ಸಾರ್ವಜನಿಕರು ಹಪಹಪಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ದೂರು ನೀಡಿದರು ಯಾವುದೇ ಕ್ರಮಕೈಗೊಳ್ಳದೆ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಾ ಉಡಾಫೆಯ ಉತ್ತರ ನೀಡುತ್ತಾ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಇತ್ತ ಗಮನಹರಿಸಿ ಕುಡಿಯುವ ನೀರಿನ ಬವಣೆಯನ್ನು ನೀಗಿಸಬೇಕೆಂದು ದ.ಸಂ.ಸ ತಾ. ಅಧ್ಯಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ, ತಾ. ಕಾರ್ಯದರ್ಶಿ ಚನ್ನಕೇಶವ ಒತ್ತಾಯಿಸಿದ್ದಾರೆ.