ನೀರು ಹರಿಸುವ ಸಮಸ್ಯೆ ಶಾಂತಿಯುತ ಪರಿಹಾರ
ಗುಬ್ಬಿ: ತಾಲೂಕಿನ ದೊಡ್ಡಗುಣಿ ಮತ್ತು ಪೆರಮಸಂದ್ರ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಚಾರವಾಗಿ ಉಂಟಾಗಿದ್ದ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಯಶಸ್ವಿಯಾಗಿದ್ದರೆ.
ಗುಬ್ಬಿ ತಾಲೂಕಿನ ದೊಡ್ಡಗುಣಿ ಕೆರೆಗೆ ಏತನೀರಾವರಿ ಮೂಲಕ ಹೇಮಾವತಿ ನೀರು ಹರಿಸಲು ಸರ್ಕಾರ ಆದೇಶಿಸಿದ್ದು ಸರ್ಕಾರದ ಆದೇಶದ ಮೇರೆಗೆ ಏತನೀರಾವರಿ ಪಂಪ್ಗೆ ಮೋಟಾರ್ ಮತ್ತು ಪಂಪ್ ಅಳವಡಿಸಿದ್ದು ಇದಕ್ಕೆ ವಿದ್ಯುತ್ ಕಲ್ಪಿಸಲು ಕಳೆದ ಹಲವು ದಿನಗಳಿಂದ ವಿದ್ಯುತ್ ಕಾಮಗಾರಿ ನಡೆಯುತ್ತಿತ್ತು. ಅಲ್ಲದೆ ವಿದ್ಯುತ್ ಕಂಬಗಳನ್ನು ಪೆರಮಸಂದ್ರ ಮೂಲಕವೇ ನೆಡಲು ಮುಂದಾದಾಗ ಇದನ್ನು ಗಮನಿಸಿದ ಪೆರಮಸಂದ್ರ ಗ್ರಾಮಸ್ಥರು ಹಾಗೂ ರೈತರು ಮೊದಲು ನಮ್ಮ ಪೆರಮಸಂದ್ರ ಕೆರೆಗೆ ನೀರು ಹರಿಸಿ ಅನಂತರ ದೊಡ್ಡಗುಣಿ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ವಿದ್ಯುತ್ ಕಂಬಗಳನ್ನು ನೆಡದಂತೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೊಡ್ಡಗುಣಿ ಮತ್ತು ಪೆರಮಸಂದ್ರ ಗ್ರಾಮಗಳ ನಡುವೆ ಸಮಸ್ಯೆ ತಲೆದೋರಿತ್ತು. ಇದನ್ನು ಮನಗಂಡ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಎರಡೂ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತರನ್ನು ಒಗ್ಗೂಡಿಸಿ ಶಾಂತಿಯುತವಾಗಿ ಮಾತುಕತೆ ನಡೆಸಿ ಎರಡೂ ಕೆರೆಗಳಿಗೂ 15 ರಿಂದ 20 ದಿನಗಳೂಳಗಾಗಿ ಹೇಮಾವತಿ ನೀರು ಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಕಳೆದ ವರ್ಷಗಳಿಂದಲೂ ಸಮರ್ಪಕವಾಗಿ ಮಳೆ ಬರದ ಕಾರಣ ಜನ ಹಾಗೂ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕೆರೆಗಳಿಗೆ ಹೇಮಾವತಿ ನೀರು ಅನಿವಾರ್ಯವಾಗಿದ್ದು ನೀರು ಹರಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಹೇಮಾವತಿ ನದಿಗೆ ಸಮರ್ಪಕವಾಗಿ ನೀರು ಸಂಗ್ರಹವಾಗಿದ್ದು ಇದುವರೆಗೆ ಹೇಮಾವತಿ ನಾಲೆಯಲ್ಲಿ 19 ಟಿ.ಎಂ.ಸಿ. ನೀರು ಮಾತ್ರ ಹರಿಯುತ್ತಿತು.್ತ ಈ ಬಾರಿ ಹೇಮಾವತಿ ಭರ್ತಿಯಾಗಿರುವುದರಿಂದ ನಾಲೆಯಲ್ಲಿ 25 ಟಿ.ಎಂ.ಸಿ.ಹೆಚ್ಚುವರಿ ನೀರು ಹರಿಸಲಾಗುವುದು. ಇದರಿಂದ ಗುಬ್ಬಿ ತಾಲೂಕಿನ ಎಲ್ಲಾ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುವುದು. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಶಾಂತಿಯುತವಾಗಿರುವಂತೆ ಮನವಿ ಮಾಡಿದರು.