ಬ್ರಾಹ್ಮಣ ಸಮಾಜ ಸಂಘಟಿತರಾಗಲು ಕರೆ
ಕ,ಪ್ರ,ವಾರ್ತೆ ಮಧುಗಿರಿ ಆ.8
ಬ್ರಾಹ್ಮಣ ಸಮಾಜ ಸಂಘಟಿತರಾಗಿ ಹೋರಾಟದ ಮೂಲಕ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಇಲ್ಲಿನ ನೌಕರರ ಭವನದಲ್ಲಿ ವಿಪ್ರ ಯುವ ವೇದಿಕೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜದ ಸಮಸ್ಯಗಳಿಗೆ ಸ್ಪಂದಿಸಲು ಸದಾ ಸಿದ್ಧನಿದ್ದು ಸಂಘಟಿತ ಹೋರಾಟದ ಮೂಲಕ ಮಾತ್ರ ತಮಗೆ ಶಕ್ತಿ ಬರುತ್ತದೆ. ಬ್ರಾಹ್ಮಣರು ಸ್ವಾಭಿಮಾನಿಗಳು, ಯಾರಲ್ಲೂ ಕೈ ಚಾಚುವುದಿಲ್ಲ. ಹಿಂದೆ ರಾಜ್ಯದ ಗೃಹ ಸಚಿವರಾಗಿದ್ದ ಎಂ.ವಿ.ರಾಮರಾಯರು ಸಣ್ಣ ಆರೋಪ ಬಂದಾಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ಬಂದ ಪ್ರಸಂಗ ನೆನಪಿದೆ. ಹಿಂದಿನಿಂದಲೂ ಬ್ರಾಹ್ಮಣರು ಎಲ್ಲ ಸಮಾಜದವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣ ಸಮುದಾಯದ ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿ ಯಶಸ್ವಿ ಕೆಲಸ ಮಾಡಿರುವುದೇ ಸಾಕ್ಷಿ ಎಂದ ರಾಜಣ್ಣ, ದೇಶದ ಎಲ್ಲ ಬಡವರ, ದೀನ ದಲಿತರ ಕಲ್ಯಾಣಾಕ್ಕಾಗಿ ಅನೇಖ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಏಳಿಗೆಗೆ ಶ್ರಮಿಸಿದ ದಿಟ್ಟ ಮಹಿಳೆ ಇಂದಿರಾಗಾಂಧಿ ಕೂಡ ಬ್ರಾಹ್ಮಣರು, ಅದೇ ರೀತಿ ಬ್ರಾಹ್ಮಣ ಸಮುದಾಯ ಇತಿಹಾಸ, ಸಂಪ್ರದಾಯ ಪಾಲಿಸಿಕೊಂಡು ಬರುವಂತೆ ಕರೆ ನೀಡಿದರು.
ಸಮುದಾಯ ಭವನ ನಿರ್ಮಿಸಿ: ದಿವ್ಯ ಸಾನಿಧ್ಯ ವಹಿಸಿದ್ದ ತಗ್ಗಿಹಳ್ಳಿ ಶ್ರೀರಾಮಕೃಷ್ಣಾಶ್ರಮದ ರಮಾನಂದಸ್ವಾಮೀಜಿ ಬ್ರಾಹ್ಮಣರು ಉಳಿದರೆ ವೈದಿಕ ಉಳಿಯುತ್ತದೆ. ಸಮಸ್ತ ಹಿಂದೂ ಸಮಾಜದ ಕಲ್ಯಾಣಕ್ಕಾಗಿ ಬ್ರಾಹ್ಮಣ ಸಂಘಟನೆ ನಡೆಯಬೇಕು. ಬ್ರಾಹ್ಮಣ ಮತ್ತು ಇತರೆ ಸಮಾಜದ ರಕ್ಷಣೆಯಾಗಬೇಕು. ಬ್ರಾಹ್ಮಣರಿಗೆ ವಿದ್ಯೆ, ಸರಸ್ಪತಿ, ಗಾಯಿತ್ರಿ ಕೃಪಕಟಾಕ್ಷ ಬೇಕು. ವಿದ್ಯೆ ಇದ್ದವರಿಗೆ ಜ್ಞಾನ ತಂತಾನೆ ಬರುತ್ತದೆ ಎಂದರು. ಶಾಸಕರು ಹೋಬಳಿಗೊಂದರಂತೆ ಗೋಶಾಲೆ ಮತ್ತು ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿ, ಗೋಶಾಲೆ ನಿರ್ವಹಣೆಯಲ್ಲಿ ಹಿಂದೆ ಆದಂತಹ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಹಾಗೂ ಬ್ರಾಹ್ಮಣರಿಗಾಗಿ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಕೋರಿದರು.
ವಿನಯಶರ್ಮ ಪ್ರಾಸ್ತಾವಿಕ ಭಾಷಣ ಮಾಡಿದರು. ತಾ.ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಆರ್.ನಂಜುಂಡಯ್ಯ, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿದರು. ತಾ.ವಿಪ್ರ ಯುವ ವೇದಿಕೆ ಅಧ್ಯಕ್ಷ ಬಿ.ಆರ್.
ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಶಂಕರ ಸೇವಾ ಸಮಿತಿ ಅಧ್ಯಕ್ಷ ಕೆ.ನಾಗರಾಜ ಶಾಸ್ತ್ರಿ, ತಹಸೀಲ್ದಾರ್ ಕೆ.ರಮೇಶ್, ಪುರಸಭೆ ಸದಸ್ಯ ಎನ್. ಗಂಗಣ್ಣ ಉಪಸ್ಥಿತರಿದ್ದರು. ಮಂಜುನಾಥ್ ಸ್ವಾಗತಿಸಿ ವಿಶ್ವನಾಥ್ ನಿರೂಪಿಸಿ ಗುರುಪ್ರಸಾದ್ ವಂದಿಸಿದರು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.