ರಾಯಲಸೀಮೆಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ
ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ತುಮಕೂರು ಆ.8
ಕಳೆದೈದು ವರ್ಷಗಳಿಂದ ರಾಯಲಸೀಮೆಯಲ್ಲಿ ಹೆಚ್ಚು ಕಡಿಮೆ ಸದ್ದಡಗಿದ್ದ ನಕ್ಸಲರ ಚಟುವಟಿಕೆಗಳು ಈಗ ಮತ್ತೆ ಗರೆಗೆದರಿಕೊಂಡಿವೆ. 2005ರಲ್ಲಿ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ನಡೆಸಿ ಐವರು ಪೊಲೀಸರು ಮತ್ತು ಒಬ್ಬ ನಾಗರಿಕನನ್ನು ಹತ್ಯೆ ಮಾಡಿದ ಬಳಿಕ ಸತತ ಕೂಂಬಿಂಗ್ನಿಂದ ಹೆಚ್ಚು ಕಡಿಮೆ ನಕ್ಸಲರ ಅಟ್ಟಹಾಸದ ಸದ್ದಡಗಿಸಲಾಗಿತ್ತು.
ಸಣ್ಣ ಪುಟ್ಟ ಘಟನೆ ಹೊರೆತುಪಡಿಸಿದರೆ ಮತ್ಯಾವುದೇ ಘಟನೆಗಳೂ ನಡೆದ ವರದಿಯಾಗಿರಲಿಲ್ಲ. ಆದರೆ, ಇದೀಗ ಪಾವಗಡದ ಶಾಸಕ ತಿಮ್ಮರಾಯಪ್ಪ ಅವರಿಗೆ ಬೆದರಿಕೆ ಪತ್ರವೊಂದನ್ನು ರವಾನಿಸುವ ಮೂಲಕ ಮತ್ತೆ ಗಡಿ ಭಾಗದ ಪಾವಗಡದಲ್ಲಿ ನಕ್ಸಲರು ಸಕ್ರಿಯರಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ, ನಾಗಲಮಡಿಕೆ ಹೋಬಳಿಗಳಲ್ಲಿ ಹೆಚ್ಚಾಗಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದವು. ಹಾಗೆಯೇ ಕಸಬಾ ಹಾಗೂ ನಿಡಗಲ್ಲು ಹೋಬಳಿಗಳಲ್ಲೂ ಇವರು ತುಸು ಸಕ್ರಿಯರಾಗಿದ್ದರು. ನೆರೆಯ ಆಂಧ್ರದಲ್ಲಿ ನಕ್ಸಲರು ಕಾರ್ಯಾಚರಣೆ ನಡೆಸಿ ಪಾವಗಡ ತಾಲೂಕಿನುದ್ದಕ್ಕೂ ವ್ಯಾಪಿಸಿರುವ ಎತ್ತರದ ಬೆಟ್ಟಗುಡ್ಡಗಳನ್ನೇ ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿದ್ದರು.
ಪಾವಗಡದೊಂದಿಗೆ ನಕ್ಸಲ್ ನಂಟು: ರಾಯಲಸೀಮೆಯಾದ ಪಾವಗಡಕ್ಕೂ ನಕ್ಸಲರಿಗೂ ದಶಕಗಳಿಂದಲೂ ನಂಟಿದೆ. ಈ ಹಿಂದೆ ರಾಮಕೃಷ್ಣ ಎಂಬವರನ್ನು ಹೊಡೆದುರುಳಿಸಲಾಗಿತ್ತು. ಹಾಗೆಯೇ ಸೂಲನಾಯಕನಹಳ್ಳಿಯಲ್ಲಿ ಜಮೀನ್ದಾರ್ ಒಬ್ಬ ನಕ್ಸಲರಿಗೆ ವಿರುದ್ಧವಾಗಿದ್ದ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಇವುಗಳೊಂದಿಗೆ ಕೆಲವು ಗುಡಿಸಲುಗಳನ್ನೂ ಧ್ವಂಸ ಮಾಡಲಾಗಿತ್ತು.
ಆದರೆ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡವಾದ ಬಳಿಕ ಪೊಲೀಸ್ ಇಲಾಖೆ ಮತ್ತು ಸರ್ಕಾರ ರೆಡ್ ಅಲರ್ಟ್ ಘೋಷಿಸಿತ್ತು. ಒಂದೆಡೆ ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಸತತ ಕೂಂಬಿಂಗ್ ಕೈಗೊಳ್ಳಲಾಯಿತು. ಮತ್ತೊಂದೆಡೆ ಯುವಕರು ನಕ್ಸಲ್ ಚಿಂತನೆಗಳೆಡೆಗೆ ಆಕರ್ಷಿತರಾಗದ ಹಾಗೆ ವಿಶೇಷ ಪ್ಯಾಕೇಜ್ಗಳನ್ನೂ ಘೋಷಿಸಲಾಗಿತ್ತು. ಇವೆಲ್ಲದರ ಪರಿಣಾಮ ನಕ್ಸಲ್ ಚಟುವಟಿಕೆಗಳು ಸಾಕಷ್ಟು ತಹಬದಿಗೆ ಬಂದಿದ್ದವು.
ನಕಲಿ ನಕ್ಸಲರು ಇದ್ದಾರೆ: ಒಂದೆಡೆ ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ನಕಲಿ ನಕ್ಸಲರ ಕಾಟವನ್ನೂ ಎದುರಿಸಬೇಕಾಗಿದೆ. ಸಣ್ಣ ಪುಟ್ಟ ರೌಡಿಗಳೂ ತಾವು ನಕ್ಸಲರು ಎಂದು ಬೆದರಿಸಿ ಹಣ ಕೀಳುತ್ತಿದ್ದರು. ಎಲ್ಲವಕ್ಕೂ ಪೊಲೀಸರ ಕೂಂಬಿಂಗ್ ತಕ್ಕ ಉತ್ತರ ನೀಡಿತ್ತು.
ಇನ್ನೇನು ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಿಂತಿದೆ ಎನ್ನುವಷ್ಟರಲ್ಲಿ ಪಾವಗಡದ ಶಾಸಕರಿಗೆ ಬಂದಿರುವ ಬೆದರಿಕೆ ಪತ್ರ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಪತ್ರ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಸಾಕೇತ್ ರಾಜನ್ ಅವರನ್ನು ಎನ್ಕೌಂಟರ್ ಮಾಡಿದ್ದಕ್ಕೆ ಪ್ರತಿಫಲವಾಗಿ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಹತ್ಯಾಕಾಂಡ ಮಾಡಲಾಗಿತ್ತು ಎಂದು ನಕ್ಸಲರು ಹೇಳಿಕೊಂಡಿದ್ದರು. ಆದರೆ, ಈಗೀಗ ಎಲ್ಲವಕ್ಕೂ ಒಂದು ಫುಲ್ ಸ್ಟಾಪ್ ಸಿಕ್ಕಿದೆ ಎನ್ನುವಂತಾಗಿತ್ತು. ಇದೀಗ ಮತ್ತೆ ಕೆಂಪು ಉಗ್ರರ ಚಟುವಟಿಕೆಗಳು ಬೆಳಕಿಗೆ ಬರುತ್ತಿದ್ದು, ಕೂಂಬಿಂಗ್ಗೆ ನಕ್ಸಲ್ ನಿಗ್ರಹ ಪಡೆ ಸಜ್ಜಾಗಬೇಕಿದೆ.