ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈತಪರ ಸಮಸ್ಯೆ ಪರಿಹಾರಕ್ಕೆ 12ರಂದು ಬೃಹತ್ ಪಾದಯಾತ್ರೆ: ಲೋಕೇಶ್ವರ

Rashmi Kasaragodu
Updated On : 9 Aug 2013, 12:35 pm

ತಿಪಟೂರು: ಭೀಕರ ಬರಗಾಲಕ್ಕೆ ಸಿಲುಕಿ ಬಸವಳಿದಿರುವ ತಾಲೂಕಿನ ರೈತಪರ ಸಮಸ್ಯೆಗಳ ಪರಿಹಾರಕ್ಕಾಗಿ ಆ.12ರ ಸೋಮವಾರ ಬರದ ಹೋಬಳಿ ಹೊನ್ನವಳ್ಳಿಯಿಂದ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಕೆಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿಗೆ ಕಳೆದ 5-6 ವರ್ಷಗಳಿಂದ ನಿರಂತರವಾಗಿ ಮಳೆಯಾಗದೆ ತೆಂಗು ನೆಲಕಚ್ಚಿರುವುದಲ್ಲದೆ ನಾನಾ ರೋಗಗಳಿಗೆ ಈಡಾಗಿದೆ. ಕೊಬ್ಬರಿ ಧಾರಣೆಯೂ ಬಿದ್ದು ಹೋಗಿದೆ. ತಾಲೂಕಿನಲ್ಲಿ ಅಂತರ್ಜಲದ ಮಟ್ಟ ತೀವ್ರ ಕುಸಿದಿದೆ. ಸದ್ಯದಲ್ಲೆ ಮಳೆ ಬಾರದಿದ್ದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ರೈತರು ಬ್ಯಾಂಕ್ಗಳಲ್ಲಿ ಮಾಡಿರುವ ಸಾಲಗಳಿಗೆ ಬಡ್ಡಿ ಸಹ ಕಟ್ಟಲಾಗದ ಸ್ಥಿತಿಯಲ್ಲಿದ್ದಾರೆ. ತೀವ್ರ ಬರಗಾಲ ಇರುವುದರಿಂದ ಎಪಿಎಲ್ ಕಾರ್ಡ್ದಾರರಿಗೂ ಸರ್ಕಾರ ರಿಯಾಯಿತಿ ದರದಲ್ಲಿ ಅಕ್ಕಿ ನೀಡಲಿ. ತಾಲೂಕಿನ ರೈತರಿಗೆ ಪಶುಸಂಗೋಪನೆ ಜೀವದಾನವಾಗಿದೆ. ಆದರೆ ದನಕರುಗಳಿಗೆ ಮೇವಿಲ್ಲದೆ ಸಿಕ್ಕಷ್ಟು ಅಗ್ಗದ ಬೆಲೆಗೆ ಮಾರುವಂತಾಗಿದ್ದು, ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ತೀರ್ಮಾನಿಸಿ ಪ್ರತಿ ಗ್ರಾ.ಪಂ.ಗೊಂದು ಗೋಶಾಲೆ ತೆರೆಯಲಿ. ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸಕಾಲಕ್ಕೆ ವೈದ್ಯರು ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ ಹೇಳತೀರದಾಗಿದೆ. ನಗರದ ರಸ್ತೆಗಳು ಹಾಳಾಗಿ 3-4 ವರ್ಷಗಳಾಗಿದ್ದು, ಮಳೆಗಾಲದಲ್ಲಿ ಕೊಚ್ಚೆಗುಂಡಿಯಾಗಿ, ಬಿಸಿಲಿನಲ್ಲಿ ಧೂಳು ಆವರಿಸಿಕೊಂಡು ನಾಗರಿಕರ ಆರೋಗ್ಯ ಹಾಳಾಗಿದೆ ಎಂದರು.
ಸದ್ಯದಲ್ಲೇ ಬರಲಿದೆ: ತೆಂಗಿನ ಅಭಿವೃದ್ಧಿ ಪಡೆದಿರುವ ಸಾಲ ಮನ್ನ ಮಾಡಿಸಬೇಕು, ಒಣಗಿ ಬಿದ್ದಿರುವ ತೆಂಗಿನ ಮರಗಳಿಗೆ ಕನಿಷ್ಠ 5ಸಾವಿರ ಪರಿಹಾರ ನೀಡಿ ಹೊಸದಾಗಿ ತೆಂಗು ಹಾಕಲು ಗಿಡವೊಂದಕ್ಕೆ ರು.3 ಸಾವಿರ ನೀಡಬೇಕು. ತೆಂಗಿನೊಳಗಡೆ ಅಂತರ್ ಬೆಳೆಗಳಾಗಿ ಸಪೋಟ, ದಾಳಿಂಬೆ, ಪಪ್ಪಾಯಿ, ನುಗ್ಗೆ, ಬಾಳೆ ಇತರೆ ಗಿಡಗಳನ್ನು ಹಾಕಲು ಶೇ.100 ಹಾಗೂ ಡ್ರಿಪ್ ಇರಿಗೇಷನ್ ಶೇ.100ರಷ್ಟು ಸಬ್ಸಿಡಿ ನೀಡಬೇಕು. ಇದಾಗದಿದ್ದಲ್ಲಿ ಕಲ್ಪತರು ನಾಡು ಬರದ ಬೀಡಾಗಿ ರೈತರು ಆತ್ಮಹತ್ಯೆ ಅಥವಾ ಗುಳೆ ಹೋಗುವ ಪರಿಸ್ಥಿತಿ ಸದ್ಯದಲ್ಲೆ ಬರಲಿದೆ ಎಂದರು. ಪಿ.ಎಲ್.ಡಿ.ಬ್ಯಾಂಕ್ಗಳಲ್ಲಿ ತಾಲೂಕಿನ ರೈತರು ಜಮೀನು ಅಭಿವೃದ್ಧಿಗೆ ಶೇ.14ರ ದರದಲ್ಲಿ ಸಾಲ ಪಡೆದಿದ್ದು, 4-5ವರ್ಷಗಳಿಂದ ನಿರಂತರವಾಗಿ ಬರಗಾಲವಿರುವುದರಿಂದ ಸಾಲ  ಕಟ್ಟಲಾಗುತ್ತಿಲ್ಲ. ಸರ್ಕಾರ ಸೊಸೈಟಿಗಳ ಶೇ.3ರ ಬಡ್ಡಿ ಮನ್ನಾ ಮಾಡಿದ್ದು, ಪಿಎಲ್ಡಿ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ರೈತರಿಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸಹಕಾರಿ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿ ಬಡ್ಡಿಯನ್ನಾದರೂ ಮನ್ನಾ ಮಾಡಿಸಿ ರೈತರಿಗೆ ಸಹಾಯ ಮಾಡಬೇಕಿದೆ ಎಂದರು.
 ನಗರದ ಹಾಗೂ ತಾಲೂಕಿನ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಆ.12ರಂದು ಹೊನ್ನವಳ್ಳಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿ ತಾ.ಅಧ್ಯಕ್ಷ ರಘುಪತಿ, ನಗರಸಭೆ ಸದಸ್ಯರಾದ ನಿಜಗುಣ, ರಾಜಶೇಖರ್, ಯದುನಂದನ, ಕರಡಿ ಸೊಸೈಟಿ ಅಧ್ಯಕ್ಷ ಕೆ.ಆರ್. ದೇವರಾಜ್, ಮಾಜಿ ನಗರಸಭಾ ಸದಸ್ಯ ನಾಸೀರ್ ಖಾನ್, ಮುಖಂಡರುಗಳಾದ ಗುಂಗರಮೆಳೆ ನಂದೀಶ್, ಆಲ್ದಹಳ್ಳಿ ವಿಶ್ವನಾಥ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement