ಸೂಕ್ತ ಮುಂಜಾಗ್ರತೆಯಿಂದ ಮರಣ ಪ್ರಮಾಣ ತಡೆಗಟ್ಟಬಹುದು: ಡಾ. ಭಾಸೂರ್ ಅಭಿಮತ
ಕ.ಪ್ರ.ವಾರ್ತೆ ತುಮಕೂರು ಆ. 8
ಸೂಕ್ತ ಮುಂಜಾಗ್ರತೆ, ವೈದ್ಯರು ಮತ್ತು ಶುಶ್ರೂಷಕಿಯರ ಸಲಹೆಯಿಂದ ಬಹುಪಾಲು ಮರಣ ಪ್ರಮಾಣ ತಡೆಗಟ್ಟಬಹುದಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶ್ರೀಕಾಂತ್ ಆರ್. ಭಾಸೂರ್ ಅಭಿಪ್ರಾಯಪಟ್ಟರು.
ಅವರು ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತುಮಕೂರಿನ ಶ್ರೀದೇವಿ ನರ್ಸಿಂಗ್ ಕಾಲೇಜಿನ ವತಿಯಿಂದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಸೂತಿ ವಿಭಾಗದ ಪ್ರೊ. ರೆಜಿನ ಮಾತನಾಡಿ ಸ್ತನ್ಯಪಾನದ ಪ್ರಾಮುಖ್ಯತೆ ಅನುಸರಿಸಬೇಕಾದ ಕ್ರಮಗಳು ತೊಂದರೆ ಮತ್ತು ನಿವಾರಣ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.
ಶ್ರೀದೇವಿ ವೈದ್ಯಕೀಯ ವಿದ್ಯಾಲಯದ ಪ್ರಸೂತಿ ತಜ್ಞೆ ಡಾ. ನಂದಿನಿ ಮಾತನಾಡಿ ಶೇ. 25 ರಷ್ಟು ತಾಯಂದಿರು ಸ್ತನ್ಯಪಾನ ಮಾಡುವುದಿಲ್ಲ. ಹಾಗೂ ಶೇ. 50 ರಷ್ಟು ತಾಯಂದಿರು ಗಿಣ್ಣು ಹಾಲನ್ನು ಮಕ್ಕಳಿಗೆ ಕೊಡುತ್ತಿಲ್ಲ. ಈ ಕಾರಣದಿಂದ ತಾಯಂದಿರಲ್ಲಿ ಜಾಗರೂಕತೆ ಮೂಡಿಸುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
ಶ್ರೀದೇವಿ ವೈದ್ಯಕೀಯ ಕಾಲೇಜಿನ ಸಹ ಪ್ರಾಂಶುಪಾಲ ಡಾ. ವಿಜಯ ತುಬಾಕಿ ಮಾತನಾಡಿ ಸಂಶೋಧನೆ ಪ್ರಕಾರ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅನೇಕರಿಗೆ ಚಿಕ್ಕಂದಿನಲ್ಲಿ ಸರಿಯಾದ ಸ್ತನ್ಯಪಾನ ಮಾಡಿಸದೇ ಇರುವುದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಆರೋಗ್ಯ ಕಾರ್ಯಕರ್ತರು ಜಾಗರೂಕತೆ ಮೂಡಿಸಬೇಕು ಎಂದರು.
ಶ್ರೀದೇವಿ ವೈದ್ಯಕೀಯ ಕಾಲೇಜಿನ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಸ್ಟಾನ್ಲಿ ಮಾತನಾಡಿ ಶಿಶು ಸ್ನೇಹ ಪೂರ್ವಕ ಆಸ್ಪತ್ರೆ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಶ್ರೀದೇವಿ ವೈದ್ಯಕೀಯ ಕಾಲೇಜಿನ ಡಾ. ಶಾಲಿನಿ ಮಾತನಾಡಿ ಮಕ್ಕಳಿಗೆ ಸ್ತನ್ಯಪಾನ ಮಾಡಿಸದಿದ್ದರೆ ವಯಸ್ಕರಾದಾಗ ಧೂಮಪಾನ ಚಟಕ್ಕೆ ಬಲಿಯಾಗುತ್ತಾರೆ ಹಾಗೂ ತಾಯಂದಿರಿಗೆ ದೇಹದ ತೂಕ ಇಳಿಸಲು ಸ್ತನ್ಯಪಾನ ಮಾಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ರಮಣ್ ಹುಲಿನಾಯ್ಕರ್ ಮಾತನಾಡಿ ಸ್ತನ್ಯಪಾನವು ಮಕ್ಕಳ ಮರಣ ಪ್ರಮಾಣ ತಡೆಗಟ್ಟಲು ಪ್ರಮುಖವಾದ ಹಸ್ತ್ರವಾಗಿದ್ದು ಉದ್ಯೋಗ ನಿರತ ತಾಯಂದಿರಲ್ಲಿ ಜಾಗರೂಕತೆ ಮೂಡಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರೊ. ಕೆ. ರಾಮು, ಟಿ.ಬಿ. ಬ್ರಹ್ಮದೇವಯ್ಯ, ಪೂರ್ಣಿಮ ಉಪಸ್ಥಿತರಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶ್ರೀಕಾಂತ್ ಆರ್. ಭಾಸೂರ್ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಪ್ರಾರ್ಥಿಸಿದರು. ರೀನಾ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು. ರೀಬಾ ನಿರೂಪಿಸಿದರು.