ಹಾಡಹಗಲೇ ಮಹಿಳೆ ಬರ್ಬರ ಹತ್ಯೆ
ಕ.ಪ್ರ.ವಾರ್ತೆ ತುಮಕೂರು ಆ. 8
ತುಮಕೂರಿನಲ್ಲಿ ಹಾಡಹಗಲೇ ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ತುಮಕೂರಿನ ಗಾಂಧಿನಗರದ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಗೃಹಿಣಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬಿಡಿಸಲು ಬಂದ ಕೆಲಸದಾಕೆ ಮೇಲೂ ಹಲ್ಲೆ ನಡೆಸಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹಾಡಹಗಲೇ ನಡೆದಿರುವ ಈ ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ರಾಜಧಾನಿ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವತ್ತು ಕೂಡ ಭೀಭತ್ಸ ಕೃತ್ಯವೊಂದಕ್ಕೆ ತುಮಕೂರು ನಗರ ಸಾಕ್ಷಿಯಾಗಿದೆ. ಇಲ್ಲಿನ ಗಾಂಧಿ ನಗರದಲ್ಲಿರುವ ಗೂಳೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕ ಸೂರ್ಯನಾರಾಯಣರಾವ್ ಅವರ ಮನೆಗೆ ಗುರುವಾರ ಬೆಳಗ್ಗೆ 11.30 ಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಅವರ ಪತ್ನಿ ನಿರ್ಮಲಾ(48)ರವರನ್ನು ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಇವರನ್ನು ಬಿಡಿಸಲು ಬಂದ ಕೆಲಸದಾಕೆ ಜಯಮ್ಮನ ಮೇಲೂ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಮಾರಣಾಂತಿಕವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಪರಿಣಾಮ ಜಯಮ್ಮ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಗಣ್ಯರ ದಂಡು: ಘಟನೆಯ ಸುದ್ಧಿ ತಿಳಿಯುತ್ತಿದ್ಧಂತೆ ಗಣ್ಯರ ದಂಡೇ ಸ್ಥಳಕ್ಕೆ ಆಗಮಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಸಂಸದ ಜಿ.ಎಸ್. ಬಸವರಾಜು, ಶಾಸಕ ಡಾ.ರಫಿಕ್ ಅಹ್ಮದ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲಿಸಿದರು. ಆದರೆ ಘಟನೆಗೆ ಕಾರಣವೇನು ಅನ್ನುವುದು ಇನ್ನು ತಿಳಿದು ಬಂದಿಲ್ಲ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಅವ್ಯಾಹತವಾಗಿ ನಡೆಯುತ್ತಿರೋ ಸರಗಳ್ಳತನ, ಮನೆಗಳ್ಳತನದಿಂದ ಆತಂಕಗೊಂಡಿದ್ದ ನಾಗರಿಕರನ್ನ ಹಾಡಹಗಲೇ ನಡೆದಿರುವ ಗೃಹಿಣಿಯ ಕೊಲೆ ಪ್ರಕರಣ ಮತ್ತಷ್ಟು ತಲ್ಲಣಗೊಳಿಸಿದೆ. ಕೂಗಳತೆಯ ದೂರದಲ್ಲೇ ಪೊಲೀಸ್ ಠಾಣೆ ಇದ್ದರೂ ಹಾಡ ಹಗಲೇ ಇಂತಹ ಕೃತ್ಯ ನಡೆದಿರೋದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಪರಾರಿಯಾಗಿರುವ ದುಷ್ಕರ್ಮಿಗಳು ಪತ್ತೆಗೆ ಬಲೆ ಬೀಸಿದ್ದು ತನಿಖೆ ಕೈಗೊಳ್ಳಲಾಗಿದೆ.