ಅಲೆಮಾರಿ ಕುಟುಂಬಕ್ಕೆ ಉಪಚುನಾವಣೆಯಲ್ಲಿ ಪಾಠ ಕಲಿಸಿ
ಕುಣಿಗಲ್: ಕೇವಲ ತಮ್ಮ ಕುಟುಂಬದ ಸದಸ್ಯರು ಅಧಿಕಾರ ಹೊಂದವುದಕ್ಕಾಗಿ ಪದೇ, ಪದೇ ಉಪ ಚುನಾವಣೆಗಳಿಗೆ ಕಾರಣರಾಗಿ, ಅಧಿಕಾರ ಚುಕ್ಕಾಣಿ ಹಿಡಿಯಲು ಕ್ಷೇತ್ರ ಕ್ಷೇತ್ರದಿಂದ ಅಲೆಮಾರಿಗಳಂತೆ ಅಲೆದು ಚುನಾವಣೆಗೆ ನಿಲ್ಲುತ್ತಾ ಜಾತ್ಯತೀತ ಪಕ್ಷವೆಂಬ ಫೋಸು ಕೊಡುತ್ತಾ ಜನತೆಯನ್ನು ವಂಚಿಸುತ್ತಿರುವ ಅಲೆಮಾರಿ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಮತದಾರರು ತಕ್ಕ ಪಾಠಕಲಿಸಲಿದ್ದಾರೆಂದು ಜಿಲ್ಲಾ ಉಸ್ತು ವಾರಿ ಸಚಿವ ಜಯಚಂದ್ರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಲಯವಾದ ನಮ್ಮಮನೆಯಲ್ಲಿ ಲೋಕಸಭೆ ಉಪಚುನಾವಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ, ರಾಜ್ಯಾಧ್ಯಕ್ಷರ ಧೋರಣೆಯನ್ನು ಕಟುವಾಗಿ ಟೀಕಿಸಿದರು. ನಾಲ್ಕುವರೆ ವರ್ಷ ಕಾಲ ಬೆಂಗಳೂರು ಗ್ರಾಮಾಂತರ ಸಂಸದರಾಗಿದ್ದ ಕುಮಾರಸ್ವಾಮಿ, ಲೋಕಸಭೆಗೆ ಕೇವಲ ಕೆಲವೇ ದಿನಗಳ ಮಟ್ಟಿಗೆ ಹಾಜರಾಗಿ ಎಂಟರಿಂದ ಹತ್ತು ನಿಮಿಷ ಹಾಜರಿದ್ದು, ಸಂಸದರಾಗಿ ಸಾಧನೆ ಮಾಡಿ, ಕ್ಷೇತ್ರದ ಸಮಸ್ಯೆಗಳ ಪೈಕಿ ಕನಿಷ್ಠ ಒಂದು ಪ್ರಶ್ನೆಯನ್ನು ಕೇಳದೆ, ಲೋಕಸಭೆ ಸಂಸದರಾಗಿ ಆರಿಸಿ ಕಳಿಸಿದ ಕ್ಷೇತ್ರದ ಜನತೆಗೆ ದ್ರೋಹ ಮಾಡಿದ್ದಾರೆ.
ಇಂತಹವರು ತಮ್ಮ ಕುಟುಂಬ ಸದಸ್ಯರಿಗೆ ಅಧಿಕಾರ ನೀಡಲಿಕ್ಕಾಗಿಯೆ ಪದೇ, ಪದೇ ಉಪಚುನಾವಣೆಗಳನ್ನು ಜನತೆಯ ಮೇಲೆ ಬಲವಂತವಾಗಿ ಹೇರಿ ನೂರಾರು ಕೋಟಿ ರು.ಗಳ ಜನತೆಯ ತೆರಿಗೆ ಹಣ ಪೋಲಾಗುವಂತೆ ಮಾಡಿದ್ದು ಇನ್ನು ಪ್ರಸಕ್ತ ಲೋಕಸಭೆ ಉಪಚುನಾವಣೆಗೆ ಕಾರಣವಾಗಿರುವ ಕುಮಾರಸ್ವಾಮಿಯವರು, ತಮ್ಮ ಪತ್ನಿಯನ್ನೆ ಕಣಕ್ಕಿಳಿಸಿದ್ದು, ಇನ್ನಾವ ಮುಖವನ್ನಿಟ್ಟುಕೊಂಡು ಜನತೆಯ ಮುಂದೆ ಮತಯಾಚಿಸಲು ಬರುತ್ತಾರೆಂದು ಟೀಕಿಸಿದರು.
ನಾಟಕ: ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು, ಈ ಹಿಂದೆ ತಮ್ಮ ಮಗ ಬಿಜೆಪಿಯೊಂದಿಗೆ ಸರ್ಕಾರ ಮಾಡಿದಕ್ಕೆ ಪಶ್ಚಾತಾಪದ ನಾಟಕವಾಡಿ ಜಾತ್ಯತೀತ ಪಕ್ಷವಾಗಿದ್ದು ಕೋಮುವಾದಿ ಪಕ್ಷದೊಂದಿಗೆ ಕೈ ಜೋಡಿಸಿದ್ದಕ್ಕೆ ಮುಸ್ಲಿಂ ಬಾಂಧವರಲ್ಲಿ ಕ್ಷಮೆಯಾಚಿಸಿದ್ದರು.
ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಬಡವರ ಎಳಿಗೆಗೆ ಶ್ರಮಿಸುತ್ತಿದೆ, ರಾಜ್ಯದ ಕಾಂಗ್ರೆಸ್ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಪಕ್ಷದ ಹೈಕಮಾಂಡ್‌ನ ನಿರ್ಧಾರದಂತೆ ನನ್ನ ತಮ್ಮ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಪಕ್ಷವು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಎಲ್ಲಾ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಸುರೇಶ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫೀ ಅಹಮದ್, ಶಾಸಕರಾದ ಷಡಕ್ಷರಿ, ಮಾಜಿ ಶಾಸಕರಾದ ಬಿ.ಬಿ. ರಾಮಸ್ವಾಮಿಗೌಡ, ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿದರು.