ಈದ್ಗಾ ಮೈದಾನದಲ್ಲಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ
ಕುಣಿಗಲ್: ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧೆ, ಭಕ್ತಿಗಳಿಂದ ಶುಕ್ರವಾರ ಆಚರಿಸಿದರು.
ಬೆಳಗ್ಗೆ ಪಟ್ಟಣ ಸೇರಿದಂತೆ ಪಟ್ಟಣಕ್ಕೆ ಹೊಂದುಕೊಂಡಂತಹ ಸುತ್ತಮುತ್ತಲ ಗ್ರಾಮಗಳಿಂದ ತಂಡೋಪತಂಡವಾಗಿ ಆಗಮಿಸಿದ ಮುಸ್ಲಿಂ ಬಾಂಧವರು, ಪಟ್ಟಣದ ಹೃದಯ ಭಾಗದಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಂಘಟನೆಗೊಂಡರು.
ಮೌಲ್ವಿಗಳಾದ ಹಬೀಬುರ್ ರೆಹಮಾನ್, ಹತ್ತ್ತೂವರೆ ಗಂಟೆಗೆ ಸಾಮೂಹಿಕ ಪ್ರಾರ್ಥನೆಯ ಘೋಷಣೆ ಮಾಡಿ, ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ನಂತರ ಹಬ್ಬದ ಶುಭಾಶಯ ಕೋರಿ, ಧರ್ಮ ಪ್ರವಚನ ನೀಡಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಸೇರಿದ ಕಾರಣ ಈದ್ಗಾ ಮೈದಾನದಲ್ಲಿ ಸ್ಥಳವಕಾಶ ಕೊರತೆಯಾಗಿ, ಮುಂಭಾಗದ ಮದ್ದೂರು ರಸ್ತೆಯ ರಾಜ್ಯ ಹೆದ್ದಾರಿಯಲ್ಲೆ ಪ್ರಾರ್ಥನೆ ನೆರವೇರಿಸಿದರು.
ಶಾಸಕ ಡಿ.ನಾಗರಾಜಯ್ಯ ಸಾಮೂಹಿಕ ಪ್ರಾರ್ಥನೆ ನಂತರ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿ, ಪ್ರಾರ್ಥನೆಗೆ ಅತೀವ ಶಕ್ತಿ ಇದೆ ಎಂದರು. ಚುನಾವಣಾ ನೀತಿ ಸಂಹಿತೆ ಕಾರಣ ಹೆಚ್ಚಿನದಾಗಿ ಏನು ಹೇಳಲಾಗದು ಎಂದು ಹೇಳಿ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಶೂರಾಸಮಿತಿ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್ (ಭಯ್ಯಾ), ಮುಖಂಡರಾದ ಸನಾವುಲ್ಲಾ, ಹಮೀದ್, ರೆಹಮಾನ್, ಅನ್ಸರ್‌ಪಾಶ, ಏಜಾಸ್‌ಪಾಶ ಸೇರಿದಂತೆ ಇತರರು ಉಪಸ್ತಿತರಿದ್ದರು.