ಎಸ್‌ಬಿಎಂ ಉದ್ಯೋಗಿ ಪತ್ನಿ ಕೊಲೆ ಪ್ರಕರಣ: ಆರೋಪಿ ಬಂಧನ
ಕನ್ನಡಪ್ರಭ ವಾರ್ತೆ ತುಮಕೂರು ಆ.9
ತುಮಕೂರಿನ ಗಾಂಧಿನಗರದಲ್ಲಿ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಬೆಳಗ್ಗೆ 11-30 ಗಂಟೆ ಸಮಯದಲ್ಲಿ ತುಮಕೂರು ನಗರದ ಗಾಂಧಿನಗರ ಬಡಾವಣೆಯ ರೈಲ್ವೆ ನಿಲ್ದಾಣದ ಸಮೀಪ ಮನೆಯಲ್ಲಿ ವಾಸವಾಗಿರುವ ಗೂಳೂರು ಎಸ್.ಬಿ.ಎಂ. ಬ್ಯಾಂಕ್‌ನ ಉದ್ಯೋಗಿ ಸೂರ್ಯನಾರಾಯಣರಾವ್ ಬುದ್ದೀರ್ ಎಂಬುವವರ ಹೆಂಡತಿ ನಿರ್ಮಲ ಎಂಬುವವರನ್ನು ಕೊಚ್ಚಿ ಕೊಲೆಯಾಗಿತ್ತು.
ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ ಈ ಕೊಲೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದರು.
ಈ ಸಂಬಂಧ ಆರೋಪಿಗಳ ಪತ್ತೆ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಜಿ ರವಿಕುಮಾರ್ ಹಾಗೂ ಹೆಬ್ಬೂರು ಪೊಲೀಸ್ ಠಾಣಾ ಪಿ.ಎಸ್.ಐ. ಜಿ. ಸಿದ್ದರಾಜು ಹಾಗೂ ಸಿಬ್ಬಂದಿ ಒಂದು ತಂಡವನ್ನು ರಚಿಸಿದ್ದು, ಸದರಿ ತಂಡವು ಘಟನೆ ನಡೆದ ಸ್ಥಳದಲ್ಲಿ ಆರೋಪಿಯ ಬಗ್ಗೆ ದೊರೆತ ಖಚಿತ ಸುಳಿವಿನ ಆಧಾರದ ಮೇಲೆ ಆರೋಪಿ ಚನ್ನೇನಹಳ್ಳಿ ವಾಸಿ ಲಿಂಗರಾಜಯ್ಯ ಅವರನ್ನು ಬಂಧಿಸಲಾಗಿದೆ.
ಈಗ್ಗೆ 10 ವರ್ಷಗಳ ಹಿಂದೆ ಆರೋಪಿ ಲಿಂಗರಾಜಯ್ಯ, ಎಸ್.ಬಿ.ಎಂ. ಬ್ಯಾಂಕ್‌ನ ಉದ್ಯೋಗಿ ಸೂರ್ಯನಾರಾಯಣರಾವ್ ಬುದ್ದೀರ್ ಅವರ ಮೂಲಕ 1 ಲಕ್ಷ 25 ಸಾವಿರ ರು. ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ, ಸದರಿ ಹಣವನ್ನು ವಾಪಸ್ ನೀಡುವಂತೆ ಆರೋಪಿ ಹಲವಾರು ಬಾರಿ ಬ್ಯಾಂಕ್ ಹಾಗೂ ಮನೆಯ ಹತ್ತಿರ ಹೋಗಿ ಹಣ ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದು, ಸೂರ್ಯನಾರಾಯಣರಾವ್ ಅವರು ನೀನು ಹಣ ಇಟ್ಟಿರುವ ಬಗ್ಗೆ ದಾಖಲಾತಿಯನ್ನು ನೀಡುವಂತೆ ಅನೇಕ ಬಾರಿ ತಿಳಿಸಿದ್ದರು.
ಇದೇ ವಿಚಾರದಲ್ಲಿ ಸೂರ್ಯನಾರಾಯಣರಾವ್ ಅವರು ನನಗೆ ಹಣ ನೀಡದೇ ಮೋಸ ಮಾಡುತ್ತಿದ್ದಾರೆ ಎಂದು ತಿಳಿದು ಆರೋಪಿಯು ಈ ಕೃತ್ಯ ಎಸಗಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹನುಮಂತರಾಯ ಹಾಗೂ ಡಿ.ಎಸ್.ಪಿ. ಸೌಮ್ಯಲತ ಅವರ ಮಾರ್ಗದರ್ಶನದಲ್ಲಿ ಸದರಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಆರ್.ಜಿ ರವಿಕುಮಾರ್, ಜಿ. ಸಿದ್ದರಾಜು, ಮೋಹನ್ ಕುಮಾರ್, ಗಿರೀಶ್, ಸುರೇಶ್, ಗಂಗಣ್ಣ, ವೆಂಕಟೇಶ್, ನರಸಿಂಹರಾಜು ಅವರ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರಮಣಗುಪ್ತ ಪ್ರಶಂಸಿದ್ದಾರೆ.