ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಕೆರೆಗೆ ಹಾರಿದ್ದ ವೃದ್ಧೆ ರಕ್ಷಣೆ
ಕುಣಿಗಲ್: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಕೆರೆಗೆ ಹಾರಿದ್ದ ವೃದ್ಧೆಯನ್ನು ರಕ್ಷಿಸುವ ಮೂಲಕ ಕುಣಿಗಲ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ವೃದ್ಧೆಯೊಬ್ಬರು ಪಟ್ಟಣದ ದೊಡ್ಡಕೆರೆಯ ಏರಿಯ ಮೇಲೆ ಅನುಮಾನಾಸ್ಪಾದವಾಗಿ ತಿರುಗಾಡುತ್ತಿದ್ದು, ಇದನ್ನು ಕಂಡ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೇದೆ ನವಿನ್ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ಹುಡುಕಾಡಲು ಯತ್ನಿಸಿದಾಗ ವೃದ್ದೆ ಕೆರೆಗೆ ಹಾರಿದ್ದರು. ಕೂಡಲೆ ಇತರೆ ಸಾರ್ವಜನಿಕರ ನೇರವಿನಿಂದ ಕೆರೆಗೆ ಹಾರಿದ ಪೇದೆ, ವೃದ್ಧೆಯನ್ನು ರಕ್ಷಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಲ್ಲದೆ, ಆಕೆ ಸೂಕ್ತ ಔಷಧೋಪಚಾರಕ್ಕೆ ಶ್ರಮಿಸಿ, ಮನೆಯಿಂದ ಬಟ್ಟೆ, ಬರೆಯನ್ನು ತಂದುಕೊಟ್ಟರು.
ರಾತ್ರಿ ವೇಳೆಗೆ ಚೇತರಿಸಿಕೊಂಡ ವೃದ್ಧೆ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೆ, ಮೌನಕ್ಕೆ ಶರಣಾದಳು. ಬೆಳಗ್ಗೆ ಉಪಹಾರ ಸೇವಿಸಿದ ವೃದ್ಧೆ ತಾನು ಬೆಂಗಳೂರಿನ ಹನುಮಕ್ಕ ಎಂದು ಮಾತ್ರ ತಿಳಿಸಿದರಲ್ಲದೆ, ಮನೆಗೆ ಹೋಗಲು ನಿರಾಕರಿಸಿದರಲ್ಲದೆ, ಮನೆಯ ವಿಳಾಸ ನೀಡಲು ನಿರಾಕರಿಸಿ ಮೌನವಹಿಸಿದರು. ಬುಧವಾರ ಮಧ್ಯಾಹ್ನ ಸಂಪೂರ್ಣವಾಗಿ ಚೇತರಿಸಿಕೊಂಡ ವೃದ್ಧೆ ಹನುಮಕ್ಕಳನ್ನು ಠಾಣೆಗೆ ಕರೆತಂದು ಊಟೋಪಚಾರ ನೀಡಿ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವೃದ್ಧೆಯನ್ನು ಸಮೀಪದ ವೃದ್ಧಾಶ್ರಮಕ್ಕೆ, ವಾಹನ ವ್ಯವಸ್ಥೆ ಮಾಡಿ ಕಳಿಸಿಕೊಡುವ ಮೂಲಕ ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ, ಆತ್ಮಹತ್ಯೆಗೆ ಶರಣಾಗಲು ಕೆರೆಗ ಹಾರಿದ್ದ ವೃದ್ಧೆಯನ್ನು ಸಂರಕ್ಷಿಸುವ ಮೂಲಕ ಮಾನವೀಯತೆ ಮೆರೆದಿರುವುದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.