ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಳೆ ಇಳಿಮುಖ ಭೀತಿಯಲ್ಲಿ ಕಲ್ಪತರು ಜಿಲ್ಲೆ

Mainashree
Updated On : 9 Aug 2013, 11:47 am

ಕನ್ನಡಪ್ರಭ ವಾರ್ತೆ  ತುಮಕೂರು  ಆ.9
ಕಲ್ಪತರು ಜಿಲ್ಲೆಯಾದ ತುಮಕೂರಿನಲ್ಲಿ ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟಿದ್ದು ಬೆಳೆ ಇಳಿಮುಖವಾಗುವ ಆತಂಕ ಎದುರಾಗಿದೆ.
ಆಗಸ್ಟ್ ಮೊದಲ ವಾರಕ್ಕೆ ಜಿಲ್ಲೆಯಲ್ಲಿ ಬಿತ್ತನೆಯಾಗಿರುವುದು ಕೇವಲ 37 ರಷ್ಟು ಮಾತ್ರ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯ ಎಲ್ಲಾ 10 ತಾಲೂಕುಗಳಲ್ಲಿ ಮಳೆ ಬೀಳದೇ ಇರುವುದೇ ಆಗಿದೆ.
ಕಳೆದ ತಿಂಗಳು ಜಿಲ್ಲೆಯಲ್ಲಿ ವಾಡಿಕೆ ಮಳೆಗಂತ ಶೇ. 25 ಮಿ.ಮೀ.ನಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಬಿತ್ತನೆ ಮಾಡುವ ಗೋಜಿಗೆ ಅನ್ನದಾತ ಹೋಗಿಲ್ಲ.
ಜೂನ್-ಜುಲೈನಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ 47.2 - 22.3 ಮಿ.ಮೀ., ಗುಬ್ಬಿಯಲ್ಲಿ 61.4 -38.5 ಮಿ.ಮೀ., ಕೊರಟಗೆರೆಯಲ್ಲಿ 73 -58.9 ಮಿ.ಮೀ., ಕುಣಿಗಲ್‌ನಲ್ಲಿ 60.-64.7 ಮಿ.ಮೀ., ಮಧುಗಿರಿಯಲ್ಲಿ 44.2 -27.9 ಮಿ.ಮೀ., ಪಾವಗಡದಲ್ಲಿ 37.5-26 ಮಿ.ಮೀ., ಶಿರಾದಲ್ಲಿ 69.9-28.8 ಮಿ.ಮೀ., ತಿಪಟೂರಿನಲ್ಲಿ 48.9 -20.5 ಮಿ.ಮೀ., ತುಮಕೂರಿನಲ್ಲಿ 89.2 -77.2 ಮಿ.ಮೀ ಹಾಗೂ ತುರುವೇಕೆರೆಯಲ್ಲಿ  36.-18.6 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
ಜೂನ್-ಜುಲೈನಲ್ಲಿ ತುಮಕೂರು ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದರೆ, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕುಗಳು ಎರಡು ತಿಂಗಳಲ್ಲಿ ಅತೀ ಕಡಿಮೆ ಮಳೆ ಬಿದ್ದ ತಾಲೂಕುಗಳಾಗಿವೆ.
ಬಿತ್ತನೆ ವಿವರ: ಜಿಲ್ಲೆಯಲ್ಲಿ ಈವರೆಗೆ ಬಿತ್ತನೆಯಾಗಿರುವ ಧಾನ್ಯಗಳ ಪೈಕಿ ಏಕದಳ ಧಾನ್ಯಗಳಾದ ರಾಗಿಯನ್ನು 64,176 ಹೆಕ್ಟೇರ್ ಪ್ರದೇಶದಲ್ಲಿ ಬತ್ತ 2713 ಹೆಕ್ಟೇರ್‌ನಲ್ಲಿ. ಜೋಳವನ್ನು 247 ಹೆಕ್ಟೇರ್‌ನಲ್ಲಿ  ಹಾಗೂ ಮೆಕ್ಕೆಜೋಳವನ್ನು 19,676 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ದ್ವಿದಳ ಧಾನ್ಯಗಳ ಪೈಕಿ ತೊಗರಿಬೇಳೆಯನ್ನು 11,411 ಹೆಕ್ಟೇರ್ ಪ್ರದೇಶದಲ್ಲಿ.  ಹುರಳಿ 595 ಹೆಕ್ಟೇರ್,  ಅವರೆ 3452 ಹೆಕ್ಟೇರ್, ಹೆಸರುಕಾಳು 11,112 ಹೆಕ್ಟೇರ್ ಪ್ರವೇಶದಲ್ಲಿ  ಬಿತ್ತಲಾಗಿದೆ.
ಎಣ್ಣೆಕಾಳುಗಳ ಪೈಕಿ ಪ್ರಮುಖ ಬೆಳೆ ಶೇಂಗಾವನ್ನು 68235 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿದ್ದು, ಪಾವಗಡದಲ್ಲಿ ಅತೀ ಹೆಚ್ಚು 43,865 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಉಳಿದಂತೆ ಶಿರಾ, 10,225 ಹೆಕ್ಟೇರ್, ಮಧುಗಿರಿಯಲ್ಲಿ 9481 ಹೆಕ್ಟೇರ್, ಕೊರಟಗೆರೆಯಲ್ಲಿ 4,275 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಕಾಯಿ ಬಿತ್ತಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 48 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತನನ್ನು ಕೃಷಿ ಇಲಾಖೆ ಹೊಂದಿದ್ದು,  ಈ ಪೈಕಿ 39,000 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ಇನ್ನೂ 9 ಸಾವಿರದಷ್ಟು ದಾಸ್ತಾನು ರೈತ ಸಂಪರ್ಕ ಕೇಂದ್ರಗಳಲ್ಲಿದ್ದು ರಸಗೊಬ್ಬರಕ್ಕೂ ಯಾವುದೇ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಅನೂಪ್ ತಿಳಿಸಿದ್ದಾರೆ.
ಸಲಹೆ: ಮುಂಗಾರು ಹಂಗಾಮು ಮುಗಿಯವ ಹಂತ ಬಂದಿದ್ದು, ಮಳೆ ಕೊರತೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಕೆಳಕಂಡ ಪರ್ಯಾಯ ಬೆಳೆಗಳನ್ನು ಬೆಳೆಯಲು ಕೃಷಿ ಇಲಾಖೆ ಸಲಹೆ ನೀಡಿದೆ.
ಆಗಸ್ಟ್ ತಿಂಗಳಲ್ಲಿ ಮಳೆಯಾದರೆ ರಾಗಿಯಲ್ಲಿ ಅಲ್ಪಾವದಿ ತಳಿಗಳಾದ ಜಿಪಿಯು-28, ಜಿಪಿಯು-66, ಎಂಎಲ್-365, ಪಿ.ಆರ್-202 ತಳಿಗಳನ್ನು ಆ.15 ರೊಳಗೆ, ಜಿಪಿಯು-26, ಜಿಪಿಯು-45, ಜಿಪಿಯು-48 ಅನ್ನು ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಮಾಡಬಹುದು.
ರಾಗಿ ಸರಿಯಾಗಿ ಹುಟ್ಟವಳಿಯಾಗದಿದ್ದರೆ ರಾಗಿ ಪೈರನ್ನು ನಾಟಿ ಮಾಡಬೇಕು.  ಸೂರ್ಯಕಾಂತಿ ಬೆಳೆಯನ್ನು ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಮಾಡಬಹುದಾಗಿದ್ದು, ಇದರೊಂದಿಗೆ ಅಲಸಂದೆ, ಸೋಯಾ ಅವರೆ, ಹುರುಳಿ, ನವಣೆ, ಸಾಮೆ, ಹೆಬ್ಬಾಳ ಅವರೆ ಹಾಗೂ ಮೇವಿನ ಬೀಜವನ್ನು ಬಿತ್ತನೆ ಮಾಡಬಹುದು ಎಂದು ತಿಳಿಸಿದೆ.
ಯೂರಿಯಾ ರಸಗೊಬ್ಬರವನ್ನು ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿಗೆ ಉಪಯೋಗಿಸಬೇಡಿ. ಇದರಿಂದ ಬೆಳೆಗಳು ಬಹುಬೇಗನೆ ರೋಗ ರುಜಿನಕ್ಕೆ ತುತ್ತಾಗುತ್ತವೆ ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement