ಸಂಭ್ರಮದ ರಂಜಾನ್
ಕ.ಪ್ರ.ವಾರ್ತೆ ತುಮಕೂರು ಆ. 9
ತುಮಕೂರಿನ ವಿವಿಧೆಡೆ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ರಂಜಾನ್ ಹಬ್ಬ ಆಚರಿಸಿದರು.
ನಗರದ ವಿವಿಧೆಡೆ ಇರುವ ಮಸೀದಿಗಳಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ನಂತರ ಹಿತೈಷಿಗಳು, ಗೆಳೆಯರು, ಬಂಧು ಬಳಗದವರನ್ನು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಕೂಡ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತ್ಯಮೂರ್ತಿ, ಎಸ್ಪಿ ರಮಣ ಗುಪ್ತ, ಕೆಜೆಪಿ ಮುಖಂಡ ಜ್ಯೋತಿ ಗಣೇಶ್ ಮುಂತಾದವರು ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರಿಗೆ ಹಾಗೂ ರಫೀಕ್ ಅಹಮದ್ ಅವರಿಗೆ ಶುಭ ಕೋರಿದರು.
ಅಲ್ಲದೇ ಇದೇ ಸಂದರ್ಭದಲ್ಲಿ ಸಿಹಿ ಹಂಚಿ ಪರಸ್ಪ ಶುಭಕೋರಲಾಯಿತು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಕೊಂಡರು.
ಮಸೀದಿಯಲ್ಲಿ ನಡೆದ ಇಫ್ತಾರ್ ಕೂಟ
ತಿಪಟೂರು: ನಗರದ ಗಾಂಧಿನಗರದ ಮದೀನ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟಕ್ಕೆ ಶಾಸಕ ಕೆ. ಷಡಕ್ಷರಿ ಭಾಗವಹಿಸಿ ಮುಸ್ಲಿಂ ಜನಾಂಗಕ್ಕೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಉಪಹಾಸವಿದ್ದ ಮುಸ್ಲಿಂ ಬಾಂದವರು ತಾಲೂಕಿನ ಪ್ರಗತಿಗೆ ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹಮದ್ ಜುಬೇರ್, ಮದೀನ ಮಸೀದಿ ಅಧ್ಯಕ್ಷ ಮಹಮದ್ ದಸ್ತಗೀರ್, ಬಿಲಾಲ್ ಮಸೀದಿ ಅಧ್ಯಕ್ಷ ಮಹಮದ್ ಶಫೀರ್, ನಗರಸಭಾ ಸದಸ್ಯ ಅಬ್ದುಲ್ ಖಾದರ್ ಮತ್ತಿತರರಿದ್ದರು.
ಶಾಸಕ ತಿಮ್ಮರಾಯಪ್ಪ ಶುಭಹಾರೈಕೆ
ಪಾವಗಡ: ಪಟ್ಟಣದಲ್ಲಿ ಶುಕ್ರವಾರ ಮುಸ್ಲಿಂ ಬಂಧುಗಳು ರಂಜಾನ್ ಹಬ್ಬವನ್ನು ಸಡಗರ ಸಂಭ್ರದಿಂದ ಆಚರಿಸಿದರು.ರೊಪ್ಪ ಮಸೀದಿ ಸೇರಿದಂತೆ ಜಾಮೀಯಾ ಮಸೀದಿ, ಮುನ್ಸಿಪಾಲ್ ಬಳಿ ಇರುವ ಮಸೀದಿ ಹಾಗೂ ದೊಡ್ಡ ಮಸೀದಿ ಸೇರಿದಂತೆ ಪಟ್ಟಣದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಹಬ್ಬವು ಮುಸ್ಲಿಂ ಜನಾಂಗ ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಶುಭ ಹಾರೈಸಿದ್ದಾರೆ.