ಸುದ್ದಿ ಸಂಕ್ಷೇಪ
ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊರಟಗೆರೆ ತಾಲೂಕು, ಹಾಗೂ ತುಮಕೂರು ತಾಲೂಕಿನ ಕೋರಾ ಹೋಬಳಿಗಳಲ್ಲಿ ಪ್ರಸ್ತುತ ಮುಂಗಾರು ಮಳೆ ಮುನಿಸಿಕೊಂಡಿದೆ. ಹಾಗಾಗಿ ಈ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಶಾಸಕ ಸುಧಾಕರ್ಲಾಲ್ ಆಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಮತ್ತು ಮೇವಿಗೆ ತೊಂದರೆಯಾಗಿರುತ್ತದೆ. ಹಾಗೂ ಮಳೆ ಅಭಾವದ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮತ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮತ್ತು ಕಂದಾಯ ಸಚಿವ ಪಿ.ಶ್ರೀನಿವಾಸಪ್ರಸಾದ್ ಅವರಿಗೆ ಕೊರಟಗೆರೆ ಶಾಸಕ ಪಿ.ಆರ್. ಸುಧಾಕರ್ಲಾಲ್ ಆಗ್ರಹಿಸಿದ್ದಾರೆ.
ಇಂದು ಶ್ರಾವಣ ಮಾಸದ ಕಾರ್ಯಕ್ರಮ
ತುಮಕೂರು: ಇಲ್ಲಿನ ಚಿಕ್ಕಪೇಟೆಯಲ್ಲಿರುವ ಘನನೀಲ ಶನೈಶ್ವರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆ. 10 ರಂದು ಶ್ರಾವಣ ಮಾಸದ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಅಕ್ಷಯ ಎಂಟರ್ಪ್ರೈಸಸ್ನವರು ಬೆಳಗಿನ ಪ್ರಸಾದ ಸೇವೆ ಮಾಡಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಇಂದು ರಾಜಗೋಪುರ ಪ್ರತಿಷ್ಠಾಪನೆ
ತಿಪಟೂರು: ತಾಲೂಕಿನ ಸಾರ್ಥವಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ರಾಜಗೋಪುರ ಪ್ರತಿಷ್ಠಾಪನಾ ಕಾರ್ಯಕ್ರಮವು ಶನಿವಾರ ನಡೆಯಲಿದೆ. ಬೆಳಿಗ್ಗೆ ಬೆಲಗೂರು ಶ್ರೀ ಬಿಂದುಮಾಧವ ಸ್ವಾಮೀಜಿ ನೇತೃತ್ವದಲ್ಲಿ ರಾಜಗೋಪುರ ಪ್ರತಿಷ್ಠಾಪನೆ, ಕುಂಭಾಭಿಷೇಕ, ಶ್ರೀ ಆಂಜನೇಯ ಮೂಲಮಂತ್ರ ಹೋಮ, ಪೂರ್ಣಾಹುತಿ ಹಾಗೂ ಗುರುಗಳಿಂದ ಆಶೀರ್ವಚನ ನಡೆಯಲಿದೆ.
ಇಂದು ವಾರ್ಷಿಕೋತ್ಸವ
ತುಮಕೂರು: ಇಲ್ಲಿನ ಅಮರಜ್ಯೋತಿ ನಗರದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಗಣೇಶ, ಶನೈಶ್ವರ, ರಾಜರಾಜೇಶ್ವರಿ ಅಮ್ಮನವರ ತೃತೀಯ ವರ್ಷದ ವಾರ್ಷಿಕೋತ್ಸವ ಆ. 10 ರಂದು ಆಯೋಜಿಸಲಾಗಿದೆ. ಶನಿವಾರ ಬೆಳಗ್ಗೆ 6 ರಿಂದ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ರುದ್ರ ಪಾರಾಯಣ, ಯುಕ್ತ ತೈಲಾಭಿಷೇಕ ಅಲಂಕಾರ ನಡೆಯಲಿದೆ 9 ಕ್ಕೆ ಗಣಪತಿ ನವಗ್ರಹ ಮೃತ್ಯುಂಜಯ ಹಾಗೂ ಶನೈಶ್ವರ ಹೋಮ ಏರ್ಪಡಿಸಲಾಗಿದೆ.
ಉದ್ಘಾಟನಾ ಸಮಾರಂಭ ಇಂದು
ತುಮಕೂರು: ಇಲ್ಲಿನ ತುಮಕೂರು ವಿವಿ ಮುಂಭಾಗ ಆ.10 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ 12ನೇ ವರ್ಷದ ಬಾವುಟ ಮೇಳ ಹಾಗೂ ತಾತ್ಕಾಲಿಕ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಶಾಸಕ ಡಾ. ರಫೀಕ್ ಅಹಮದ್ ನೆರವೇರಿಸುವರು.