ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಠಾಣೆ ಮೆಟ್ಟಿಲೇರಿದ ಕೋಳಿ ಜಗಳ

Mainashree
Updated On : 10 Aug 2013, 11:30 am

ಕುಣಿಗಲ್: ದೇವರಿಗಾಗಿ ಬಿಟ್ಟಿದ್ದ ಹುಂಜವನ್ನು ಜಮೀನು ವಿವಾದದ ಹಿನ್ನೆಲೆಯಲ್ಲಿ ತಮ್ಮ ಅಣ್ಣನ ಅಳಿಯ ಘಾಸಿಗೊಳಿಸಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಂಜದ ಮಾಲೀಕ, ಪತ್ನಿ ಸಮೇತನಾಗಿ ಕಳೆದ ಮೂರು ದಿನಗಳಿಂದಲೂ ಪೊಲೀಸ್ ಠಾಣೆ ಮುಂದೆ ಠಿಕಾಣಿ ಹೂಡಿದ್ದಾರೆ. ತಾಲೂಕಿನ ಬೋರಸಂದ್ರದ ತಿರುಮಲಯ್ಯ ತಮ್ಮ ಮನೆದೇವರಾದ ತಿಮ್ಮರಾಯಸ್ವಾಮಿಗೆಂದು ಹುಂಜವನ್ನು ಕಳೆದ ಒಂದೂವರೆ ವರ್ಷಗಳಿಂದ ಸಾಕಿದ್ದರು. ಇವರು ತಮ್ಮ ಅಣ್ಣನ ಅಳಿಯ ಅಂದಾನ ಎಂಬವರೊಂದಿಗೆ ಜಮೀನು ವಿಷಯವಾಗಿ ಜಗಳವಾಗಿತ್ತು. ಈ ಘಟನೆ ನಂತರ ದೇವರಿಗೆ ಬಿಟ್ಟಿದ್ದ ಹುಂಜ ಕಾಳರಸಿ ಹೋಗಿದ್ದಾಗ ಅದರ ತಲೆಗೆ ಬ್ಲೇಡ್‌ನಿಂದ ಗಾಯಗೊಳಿಸಲಾಗಿದೆ. ತಮ್ಮ ಮೇಲಿನ ಸಿಟ್ಟಿಗಾಗಿ ಅಂದಾನನೇ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಿ ತಿರುಮಲಯ್ಯ ಪತ್ನಿ ನರಸಮ್ಮ ಸಮೇತ ಕುಣಿಗಲ್ ಠಾಣೆಗೆ ಘಾಸಿಗೊಂಡಿರುವ ಹುಂಜದೊಂದಿಗೆ ಆಗಮಿಸಿ ಮೂರು ದಿನಗಳ ಹಿಂದೆ ದೂರು ನೀಡಿದ್ದರು.  ಎಸ್‌ಐ ದೂರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಪೊಲೀಸರು ಮೂರು ದಿನಗಳಾದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಿರುಮಲಯ್ಯ ಠಾಣೆ ಮುಂದೆಯೇ ಪತ್ನಿಯೊಂದಿಗೆ ಠಿಕಾಣಿ ಹೂಡಿದ್ದಾರೆ. ಪೊಲೀಸರು ಅಂದಾನಿಯನ್ನು ಠಾಣೆಗೆ ಬರುವಂತೆ ಸೂಚಿಸಿದ್ದು ಆತ ಹಾಜರಾಗಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೋಳಿ ಜಗಳ ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳು ಕಾಣದಂತಾಗುತ್ತಿದ್ದು, ಆರೋಪಿಗೆ ಶಿಕ್ಷೆಯಾಗುವವರೆಗೂ ಹುಂಜದ ಸಮೇತ ತಾವು ಠಾಣೆ ಮುಂದೆ ಠಿಕಾಣಿ ಹೂಡುವುದಾಗಿ ತಿರುಮಲಯ್ಯ ಹೇಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement