ಪತ್ನಿಗೆ ಬೆಂಕಿ ಹಚ್ಚಿ ಪರಾರಿಯಾದ ಪತಿ
ಕುಣಿಗಲ್: ಕ್ಷುಲಕ ಕಾರಣಕ್ಕೆ ಪತ್ನಿಗೆ ಬೆಂಕಿ ಹಚ್ಚಿ, ಪತಿ ಪರಾರಿಯಾಗಿರುವ ಘಟನೆ ತಾಲೂಕಿನ ಸಂತೇಮಾವತ್ತೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೇಮಾವತ್ತೂರಿನ ನರಸಮ್ಮ (38ವರ್ಷ) ಎಂಬಾಕೆ ಪತಿಯ ದೌರ್ಜನ್ಯಕ್ಕೆ ಒಳಗಾದ ನತದೃಷ್ಟೆಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು,ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇವರಿಗೆ ಮದುವೆಯಾಗಿ ಹದಿನಾರು ವರ್ಷ ಕಳೆದಿದ್ದು, ಕೆಲ ದಿನಗಳಿಂದ ಪತಿ ಶಂಕರಯ್ಯ, ಪತ್ನಿಯ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ 7ರಂದು ಪತ್ನಿ ಸರಿಯಾಗಿ ಅಡುಗೆ ಮಾಡಲ್ಲವೆಂಬ ಕಾರಣಕ್ಕೆ ಜಗಳ ನಡೆದು, ಪತ್ನಿ ಮನೆಯಲ್ಲಿ ಕೆಲಸ ಮಾಡುವ ವೇಳೆ ಶಂಕರಯ್ಯ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ನರಸಮ್ಮಳ ಚೀರಾಟ ಕೇಳಿದ ನೆರೆಹೊರೆಯವರು ಆಕೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.