ಪಾಳು ಬಿದ್ದಿದೆ ಪಾವಗಡ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ
ಕ.ಪ್ರ.ವಾರ್ತೆ ತುಮಕೂರು ಆ. 10
ಕಳೆದ ಸುಮಾರು ಒಂದೂವರೆ ವರ್ಷದಿಂದ ಪಾವಗಡ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೆ ಕಾರ್ಯಗಳು ಸ್ಥಗಿತಗೊಂಡಿದೆ ಎಂದು ಜಿಲ್ಲಾ ಶ್ರೀಕೃಷ್ಣ ಗೆಳೆಯರ ಬಳಗ ಅಧ್ಯಕ್ಷ ಕುಣಿಹಳ್ಳಿ ಆರ್ ಮಂಜುನಾಥ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಾವಗಡ ತಾಲೂಕಿನ ವೈ.ಎನ್ ಹೊಸಕೊಟೆ ಹೋಬಳಿ ಪೋತಗಾನಹಳ್ಳಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಸುಮಾರು ಒಂದೂವರೆ ವರ್ಷದಿಂದ ಸಿಂಬ್ಬಂದಿಯಿಲ್ಲದೆ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಇಲ್ಲಿನ ಕಟ್ಟಡ ಪಾಳು ಬಿದ್ದಿದೆ, ಕಿಟಕಿಯ ಬಾಗಿಲುಗಳ ಗ್ಲಾಸ್ಗಳು ಒಡೆದು ಹೋಗಿವೆ. ಈ ಕಟ್ಟಡಕ್ಕೆ ಲಕ್ಷಾಂತರ ಹಣ ಬಳಸಿ ನಿರ್ಮಿಸಿರುವ ಈ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಬಳಕೆಗೆ ಬಾರದಂತಾಗಿದೆ. ಇಲಿ, ಹೆಗ್ಗಣ, ಹುಳ ಉಪ್ಪಟೆಗಳ ವಾಸಸ್ಥಳವಾಗಿದೆ. ಇದುವರೆವಿಗೂ ಇಲ್ಲಿಗೆ ಪರಿಶೀಲನೆಗಾಗಿ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ.
ಹಳ್ಳಿಯ ಜನತೆಯ ಅನುಕೂಲಕ್ಕೆಂದು ನಿರ್ಮಿಸಿರುವ ಈ ಕಟ್ಟಡ ಲೆಕ್ಕಕ್ಕಿಲ್ಲದಂತಾಗಿದೆ, ಈ ಗ್ರಾಮಕ್ಕೆ ಸುಮಾರು 10 ಊರುಗಳು ಸೇರ್ಪಡೆಯಾಗುತ್ತವೆ ಈ ಊರುಗಳಿಗೆ ಅನುಕೂಲವಾಗಲೆಂದು ನಿರ್ಮಿಸಲ್ಪಟ್ಟ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಊಟಕ್ಕಿಲ್ಲದ ಉಪ್ಪಿನಕಾಯಿಂತಾಗಿದೆ, ಗ್ರಾಮೀಣ ಪ್ರದೇಶದ ಆರೋಗ್ಯದ ದೃಷ್ಟಿಯಲ್ಲಿ, ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ಉದ್ದೇಶದಿಂದ
ಸ್ಥಾಪಿಸಲಾದ ಈ ಕಟ್ಟಡವು ಅನುಕೂಲಕ್ಕೆ ಬಾರದೆ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಡೆಂಘೀಯಿಂದ ಸಾರ್ವಜನಿಕರು ನರಳುತ್ತಿದ್ದಾರೆ. ಫ್ಲೋರೈಡ್ನಿಂದ ಕೂಡಿದ ನೀರನ್ನು ಸೆವಿಸಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸೂಕ್ತ ಚಿಕಿತ್ಸೆ ದೊರೆಯದೆ ಸಾರ್ವಜನಿಕರು ಪರದಾಡುವಂತಾಗಿದೆ.
ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲ ಎಂದಿದ್ದಾರೆ. ಜಿಲ್ಲೆಯಲ್ಲಿ ಇದೇ ರೀತಿ ಇನ್ನೂ ಎಷ್ಟು ಸರ್ಕಾರಿ ಕಟ್ಟಡಗಳು ಸಿಬ್ಬಂದಿ ಇಲ್ಲದೆ ಪಾಳು ಬಿದ್ದಿವಿಯೋ. ಒಟ್ಟಿನಲ್ಲಿ ಸರ್ಕಾರ ಸಾರ್ವಜನಿಕರ ಹಿತ ರಕ್ಷಣೆಗೆ ಕಾರ್ಯಗಳನ್ನು ಜಾರಿಗೆ ತಂದರು ಸಾರ್ವಜನಿಕರಿಗೆ ತಲುಪದೆ ದುರ್ಬಳಕೆಯಾಗುವಂತಾಗಿದೆ.
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಸ್ಥಳಿಯ ಶಾಸಕ ತಿಮ್ಮರಾಯಪ್ಪ ಅವರು ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಶ್ರೀ ಕೃಷ್ಣ ಗೆಳೆಯರ ಬಳಗ ಅಧ್ಯಕ್ಷ ಕುಣಿಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.