ಸಮಾಜ ಹಾಳು ಮಾಡುವ ನಾಯಕರೇ ಹೆಚ್ಚು
ಕ.ಪ್ರ.ವಾರ್ತೆ ತುಮಕೂರು ಆ. 10
ದೇಶದ ಅವ್ಯವಸ್ಥೆ, ಮಠಾಧೀಶರ ಆಶೀರ್ವಾದ, ಅಕ್ಷರಸ್ಥರ ರಾಕ್ಷಸೀಕೃತ್ಯ, ಬೇಜವಾಬ್ದಾರಿತನ, ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳ ಪರಮ ಸ್ವಾರ್ಥ ಸೇರಿದಂತೆ ಇನ್ನಿತರೆ ವಿಷಯಗಳು ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಪ್ರತಿಧ್ವನಿಸಿದವು.
ಪ್ರತಿಭಾ ಪುರಸ್ಕಾರ, ಸನ್ಮಾನ ನೆರವೇರಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮೇಲಿನ ವಿಷಯಗಳ ಕುರಿತಂತೆ ಅಸ್ಖಲಿತ, ಸುದೀರ್ಘ ಉಪನ್ಯಾಸ ನೀಡಿ, ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದರು. ಸಮಾರಂಭ ಒಕ್ಕಲಿಗ ಜಾತಿಗೆ ಸೀಮಿತವಾಗಿದ್ದರೂ ಸಚಿವ ಕಿಮ್ಮನೆ ರತ್ನಾಕರ್ ಅವರಿಂದಾಗಿ ಉತ್ತಮ ವಿಚಾರ ಸಂಕಿರಣದ ಸ್ಪರೂಪ ಪಡೆದುಕೊಂಡಿದ್ದು ಗಮನಾರ್ಹವಾಗಿತ್ತು.
ಮಠಾಧೀಶರ ಆಶೀರ್ವಾದ: ಸಚಿವ ಕಿಮ್ನನೆ ರತ್ನಾಕರ್ ಮಾತನಾಡಿ, ಮಠಾಧೀಶರ ಆಶೀರ್ವಾದವು ತಪ್ಪಿಗೆ ರಕ್ಷಣೆಯಾಗಬಾರದು. ಮಠಾಧೀಶರ ಆಶೀರ್ವಾದ ಪಡೆಯಲು ಅರ್ಹತೆ ಬಹಳ ಮುಖ್ಯ. ಭ್ರಷ್ಟಾಚಾರ, ಮಾಡಬಾರದ್ದನ್ನು ಮಾಡಿ, ಒಳ್ಳೆಯದಾಗಲಿ ಎಂದು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೇವೆ. ಇದೊಂದು ವಿಷಾದನೀಯ ಸಂಗತಿ. ದೇಶದಲ್ಲಿ ಆಶೀರ್ವಾದದ ವಿಷಯ ಬಹಳ ಮುಖ್ಯವಾಗಿದ್ದು, ಗಮನಿಸಬೇಕಾದ ಸಂಗತಿಯಾಗಿದೆ ಎಂದು ಸಚಿವರು ಪ್ರತಿಪಾದಿಸಿದರು.
ಇಂದು ದೇಶದಲ್ಲಿ ಆದರ್ಶಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜಾತಿ ನಾಯಕರು, ಧಾರ್ಮಿಕ ನಾಯಕರು ವಿಜೃಂಭಿಸುತ್ತಿದ್ದಾರೆ. ಸಮಾಜ ಹಾಳು ಮಾಡುವ ನಾಯಕರನ್ನು ಯಥೇಚ್ಚವಾಗಿ ನೋಡುತ್ತಿದ್ದೇವೆ ಎಂದು ವಿಷಾದಿಸಿದರು.
ಅಕ್ಷರಸ್ಥರು ರಾಕ್ಷಸರಾಗಿದ್ದಾರೆ: ದೇಶದ ಅಧೋಗತಿಗೆ, ಅದ್ವಾನಗಳಿಗೆ ಅಕ್ಷರಸ್ಥರೇ ನೇರ ಹೊಣೆ. ಅಕ್ಷರಸ್ಥರು ರಾಕ್ಷಸರಾಗಿದ್ದಾರೆ. ಅಕ್ಷರಸ್ಥರಲ್ಲಿ ರಾಜಕಾರಣಿಗಳು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಜವಾನನವರೆಗೂ ಇರುವ ಸರ್ಕಾರಿ ನೌಕರರು ಅವ್ಯವಸ್ಥೆಗೆ ಕಾರಣ ಎಂಬುದು ಗಮನಾರ್ಹ. ರಾಜಕಾರಣಿಗಳು, ಸರ್ಕಾರಿ ನೌಕರರೆಂಬ ಎರಡು ವರ್ಗ ಸರಿ ಹೋದರೆ ನಾಡನ್ನು ಅತ್ಯುತ್ತಮವಾಗಿ ನಿರ್ಮಿಸಬಹುದು. ಇಂದು ಎಲ್ಲೆಲ್ಲೂ ಪದವೀಧರರೇ ತುಂಬಿ ತುಳುಕಾಡುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದೇವೆ. ಹಿಂದೆ ಎಲ್ಲರಿಗೂ ವಿದ್ಯೆಯಿರಲಿಲ್ಲ, ಅಕ್ಷರ ಜ್ಞಾನವೂ ಇರಲಿಲ್ಲ. ಎಲ್ಲರೂ ಅಕ್ಷರಸ್ಥರಾದಲ್ಲಿ, ಪದವೀಧರರಾದಲ್ಲಿ ಸಮಸ್ಯೆಗಳು ಸಂಪೂರ್ಣವಾಗಿ ನೀಗುತ್ತವೆ ಅಂದುಕೊಂಡಿದ್ದೆವು. ಆದರೆ ಇದು ಸುಳ್ಳಾಗಿದೆ. ಅಕ್ಷರಸ್ಥರು, ಪದವೀಧರರ ಸಂಖ್ಯೆ, ಪದವಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ರಾಕ್ಷಸತ್ವವೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಸಮಸ್ಯೆಯೆದುರಿಸುತ್ತಿದ್ದಾರೆ: ರೈತರು ಸಮಸ್ಯೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳು ಆತಂಕದಲ್ಲಿವೆ. ಅಕ್ಷರಸ್ಥರಲ್ಲಿ ಅಧಿಕಾರವಿದೆ, ಹಣವಿದೆ. ಆದರೆ ವಿವೇಕವಿಲ್ಲದಂತಾಗಿದೆ. ಇದನ್ನು ಮೊದಲು ಸರಿಪಡಿಸಬೇಕಾಗಿದೆ. ಹಿಂದೆ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದರೂ ಪ್ರಾಮಾಣಿಕತೆಯಿತ್ತು, ವಿವೇಕವಿತ್ತು. ಆದರೆ ಇಂದು ತದ್ವಿರುದ್ಧವಾಗಿದೆ. ವಿದ್ಯೆಯಿದ್ದರೂ ವಿವೇಕವಿಲ್ಲದಂತಾಗಿದೆ. ನಮ್ಮ ಶಿಕ್ಷಣ ಕಲಿಕೆ ಎಲ್ಲಿ ಹೋಗಿದೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ರತ್ನಾಕರ್, ಇಂದಿನ ಶಿಕ್ಷಣ ಹಾಗೂ ಅಕ್ಷರಸ್ಥರೇ ಸಮಸ್ಯೆಯಾಗಿದ್ದಾರೆ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀ, ಪಟ್ಟನಾಯಕನಹಳ್ಳಿಯ ನಂಜಾವದೂತ ಶ್ರೀ, ಮಾಯಸಂದ್ರದ ಶಿವಕುಮಾರನಾಥ ಶ್ರೀ,ಜಿಪಂ ಸಿಇಓ ಗೋವಿಂದರಾಜು, ತುಜಿಒನೌ ಅಧ್ಯಕ್ಷ ಬೈರೇಗೌಡ, ಚೌದರಿಶಂಕರ್ ಗುಬ್ಬಿ ಎಂಎಲ್ಎ ಶ್ರೀನಿವಾಸ್, ಜೆಡಿಎಸ್ ಮುಖಂಡ ಕೆ.ಬಿ. ಬೋರೇಗೌಡ,ನರಸೇಗೌಡ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.