ಅಭ್ಯರ್ಥಿಗಳ ವೈಯಕ್ತಿಕ ಟೀಕೆ ಸಲ್ಲ
ಕ.ಪ್ರ.ವಾರ್ತೆ ಕುಣಿಗಲ್ ಆ. 11
ಯಾವುದೇ ತರಹದ ಚುನಾವಣೆಗಳಿರಲಿ, ಯಾವುದೇ ಪಕ್ಷದ ಅಭ್ಯರ್ಥಿಗಳ ಬಗ್ಗೆ ವೈಯುಕ್ತಿಕ ಟೀಕೆ ಮಾಡುವುದು ಸರ್ವಥಾ ಸರಿಯಲ್ಲ, ನಿಜಕ್ಕೂ ಇಂತಹ ವಿದ್ಯಮಾನಗಳನ್ನು ಎಲ್ಲರೂ ಖಂಡಿಸಬೇಕಿದೆ. ರಾಜಕಾರಣದ ಸಚ್ಚಾರಿತ್ರ ಮೌಲ್ಯಗಳನ್ನು ಕಾಪಾಡದೆ ಹೋದಲ್ಲಿ, ಅದು ಯಾವುದೇ ರಾಜಕಾರಣಿಗೂ ಶೋಭೆ ತರವುದಿಲ್ಲವೆಂದು ಜಿಲ್ಲಾ ಉಸ್ತುವಾರಿಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಭಾನುವಾರ, ಕಾಂಗ್ರೆಸ್ ಕಾರ್ಯಾಲಯವಾದ ನಮ್ಮ ಮನೆಯಲ್ಲಿ ಸೋಮವಾರದಂದು ಬೆಂಗಳೂರು ಗ್ರಾಮಾಂತರ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರ ಬಹಿರಂಗ ಸಭೆಯ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಕಣದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳಿರಲಿ ವೈಯುಕ್ತಿಕ ಟೀಕೆ ನಿಜಕ್ಕೂ ಶೋಭೆ ತರುವುದಿಲ್ಲವೆಂದ ಅವರು, ಪ್ರಸಕ್ತ ಚುನಾವಣೆಯಲ್ಲಿನ ಜೆಡಿಎಸ್, ಬಿಜೆಪಿ ಪಕ್ಷದ ಅಪವಿತ್ರ ಮೈತ್ರಿಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದರು.
ಪುನರಾವರ್ತನೆ: ಈಗಾಗಲೆ ರಾಜ್ಯದ ಮತದಾರರು ಪ್ರಜ್ಞಾವಂತರಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳು ಹಾಕಿಕೊಂಡಿದ್ದ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟಬೆಂಬಲ ಸೂಚಿಸಿದ್ದಾರೆ. ಈ ಬಾರಿಯ ಲೋಕಸಭೆ ಉಪಚುನಾವಣೆಯಲ್ಲೂ ಸಹ ಇದೆ ಪುನಾರವರ್ತನೆ ಅಗುವುದರಲ್ಲಿ ಯಾವುದೇ ಅನುಮಾನಬೇಡ. ಚುನಾವಣೆಯಲ್ಲಿ ಮತ ಸೆಳೆಯುವುದಕ್ಕಾಗಿ ಮಾತ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಪ್ರವೃತ್ತಿಯನ್ನು ಕಾಂಗ್ರೆಸ್ ಪಕ್ಷ ಹೊಂದದೆ, ಘೋಷಿಸಿದ ಪ್ರಣಾಳಿಕೆಯಂತೆ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಅನುಷ್ಠಾನಮಾಡಿ ತೋರಿಸಿದೆ. ಇನ್ನು ಮಾಜಿ ಪ್ರದಾನಿ ದೇವೇಗೌಡರು, ಇದು ತಮ್ಮ ಕೊನೆ ಚುನಾವಣೆ ತಮ್ಮ ಸೊಸೆಯನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಕಳೆದ ಹಲವಾರು ಚುನಾವಣೆಗಳಿಂದಲೂ ಇದೇ ತಂತ್ರ, ಮಂತ್ರ ಜಪಿಸುತ್ತಿದ್ದು ಈ ಬಾರಿ ಈ ಮಂತ್ರ ಹಾಗೂ ತಂತ್ರ ನಡೆಯಲ್ಲ ಎಂದರು.
ಅಧಿಕ ಮತದ ಗೆಲವು: ಲೋಕಸಭೆ ಉಪಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡೂ ಸ್ಥಾನದಲ್ಲಿ ಅಧಿಕಮತಗಳಿಂದ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫೀ ಅಹಮದ್, ಇದೇ ಸೋಮವಾರ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇತರೆ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಲಿದ್ದು ಜಿಕೆಬಿಎಂಎಸ್ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು.
ಶಾಸಕ ಷಡಕ್ಷರಿ, ಮಾಜಿ ಶಾಸಕರಾದ ಗಂಡಸಿ ಶಿವರಾಂ, ಬಿ.ಬಿ.ರಾಮಸ್ವಾಮಿಗೌಡ, ಎಸ್.ಪಿ.ಮುದ್ದಹನುಮೇಗೌಡ, ಆರ್.ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಪ್ರಮುಖರಾದ ಹೇರೂರು ಶಂಕರ್, ಹೊನ್ನಗಿರಿಗೌಡ, ಸತೀಶ್ ಚಿಕ್ಕನಾಯ್ಕನಹಳ್ಳಿ, ರೆಹಮಾನ್ ಶರೀಫ್, ಅಕ್ಬರ್, ಏಜಾಸ್ಪಾಷ, ರವಿ, ಮುನ್ನ, ಬೆಟ್ಟಸ್ವಾಮಿ ಇತರರು ಇದ್ದರು.