ಕೃಷ್ಣಕುಮಾರ್ ರಾಜಕೀಯ ನಡೆ ಇಂದು ನಿರ್ಧಾರ
ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಪಟ್ಟಣ ಸೇರಿದಂತೆ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಏರುತ್ತಿದ್ದು, ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಅಂತಹ ಕಾವು ಕಾಣುತ್ತಿಲ್ಲ.
12ರ ಸೋಮವಾರದಂದು ಪಟ್ಟಣದಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದ ಭರಾಟೆಗೆ ಸಜ್ಜಾಗಿದ್ದು, ಈ ಮಧ್ಯೆ ಯಾವುದೇ ಪಕ್ಷಕ್ಕೂ ಅಧಿಕೃತವಾಗಿ ಬೆಂಬಲ ವ್ಯಕ್ತಪಡಿಸದಿರುವ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸಲು ಕಾರ್ಯಕರ್ತರ ಅಭಿಮಾನಿಗಳ ಸಭೆಯನ್ನು ಸೋಮವಾರ ಬೆಳಗ್ಗೆ 10.30ಕ್ಕೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನಿತಾಕುಮಾರಸ್ವಾಮಿ, ಚುನಾವಣೆ ಘೋಷಣೆಯಾದಾಗಿನಿಂದ ಮೊದಲ ಬಾರಿಗೆ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಚಾರಕ್ಕ ಆಗಮಿಸಲಿದ್ದು, ಬೆಳಗ್ಗೆ 10.30ರಿಂದ ಹುತ್ರಿದುರ್ಗ, ಹುಲಿಯೂರು ದುರ್ಗ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಲ್ಲಿ ರೋಡ್‌ಶೋ ಮೂಲಕ ಮತಯಾಚಿಸಲಿದ್ದರೆ, ಮಧ್ಯಾಹ್ನ 3ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಇತರರು ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಆರ್‌ಪಿಐ ಅಭ್ಯರ್ಥಿ ಕುಣಿಗಲ್ ಶಿವಣ್ಣ ಸಹ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಹೋಬಳಿಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯ ಗೆಲವಿಗೆ ವಿವಿಧ ರೀತಿಯ ತಂತ್ರಗಳಲ್ಲಿ ನಿರತರಾದರೆ, ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಬೇರಾದ ಮತದಾರರ ಪೈಕಿ ಬಹುತೇಕ ಗ್ರಾಮಾಂತರ ಮತದಾರರು ಇತ್ತೀಚೆಗೆ ಬಿದ್ದಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿ ತಮ್ಮ ಪಾಡಿಗೆ ತಾವಿದ್ದಾರೆ.