ಸುದ್ದಿ ಸಂಕ್ಷೇಪ
9 ಮಂದಿಗೆ ಗಾಯ
ಉಪ್ಪಿನಂಗಡಿ: ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ತುಮಕೂರಿನ ನಿವಾಸಿಗರ ತಂಡ ಪ್ರಯಾಣಿಸುತ್ತಿದ್ದ ಟಾಟಾ ಸುಮೋ ವಾಹನ ಶಿರಾಡಿ ಸಮೀಪ ರಾ.ಹೆ. 75ರ 20 ಅಡಿ ಆಳದ ಕಂದಕಕ್ಕೆ ಬಿದ್ದು 9 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ತುಮಕೂರಿನ ನಿವಾಸಿಗರ ತಂಡ ಉಳ್ಳಾಲ ದರ್ಗಾವನ್ನು ಸಂದರ್ಶಿಸಿ, ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ, ಸುಮೋದಲ್ಲಿದ್ದ ಇಮ್ರಾನ್ (24), ಇಂತಿಯಾಸ್ ಪಾಷಾ (25), ಖಾಲಿದ್ (25), ತಶ್ರೀಫ್ ಪಾಷಾ(20), ಶಬೀರ್ (21), ಅಶ್ರಫ್ ಅಲಿ(21), ಮುಬಾರಕ್ ಬಾಷಾ(25), ಶಹೀದ್ ಅಮರ್ (19), ಇಮ್ರಾನ್ ರಹಿಮತ್ (20) ಎಂಬವರು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ಷೀರಭಾಗ್ಯಕ್ಕೆ ಚಾಲನೆ
ಮಧುಗಿರಿ: ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಪೌಷ್ಟಿಕ ಸದೃಢತೆಗೆ ಕ್ಷೀರ ಭಾಗ್ಯ ಯೋಜನೆ ವರದಾನ ಎಂದು ತಾಪಂ ಅಧ್ಯಕ್ಷೆ ಯಶೋಧ ರಾಜಣ್ಣ ಅಭಿಪ್ರಾಯಪಟ್ಟರು. ಮಧುಗಿರಿ ಕಸಬಾ ಸಿದ್ದಾಪುರ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಗಂಡ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. 150 ಲೀಟರ್ ಹಾಲನ್ನು ವಿತರಿಸಿದರು.