ಕರ್ನಾಟಕ ಸುಂದರವಾಗಿಸಲು ದೃಢ ಹೆಜ್ಜೆ ಇಡಿ: ಡಾ. ಮಲ್ಲಿಕಾಘಂಟಿ ಕರೆ
ಕ.ಪ್ರ. ವಾರ್ತೆ ತುಮಕೂರು ಆ.12
ಸಮಾಜದಲ್ಲಿರುವ ಪ್ರತಿಯೊಬ್ಬರೂ ಕರ್ನಾಟಕವನ್ನು ವೈಭವಯುತ ಮತ್ತು ಸುಂದರವಾಗಿ ಕಂಗೊಳಿಸುವಂತೆ ಮಾಡುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮಲ್ಲಿಕಾಘಂಟಿ ಅವರು ಅಭಿಪ್ರಾಯಪಟ್ಟರು.
ನಗರದ ಶಿರಾ ರಸ್ತೆಯಲ್ಲಿರುವ ಕಾಳಿದಾಸ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 66ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ಧ ದಾಸಶ್ರೇಷ್ಠ ಕನಕದಾಸರ ಕುರಿತು ವಿಚಾರಧಾರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಜಾರಿಗೆ ತಂದಿರುವ ಕ್ಷೀರ ಭಾಗ್ಯ ಯೋಜನೆಯು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅಗತ್ಯವಾಗಿದೆ. ಸರ್ಕಾರದಿಂದ ವಿವಿಧ ಯೋಜನೆಯಡಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಮಕ್ಕಳು ಸದೃಢರಾಗುವುದರ ಜೊತೆಗೆ ಉತ್ತಮ ಸತ್ಪ್ರಜೆಗಳಾಗಬೇಕೆಂದು ತಿಳಿಸಿದರು.
ನಮ್ಮ ಮಕ್ಕಳು ತಂದೆ ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವುದರಿಂದ ಮೂಲಕ ನಿಜವಾದ ದೇವರನ್ನು ಕಾಣಬಹುದು. ಆದರೆ ಇಂದಿನ ಮಕ್ಕಳು ಸಂಬಳಕ್ಕಾಗಿ ತಮ್ಮ ತಂದೆ ತಾಯಿಗಳನ್ನು ಅನಾಥಾಶ್ರಮದಲ್ಲಿ ಇಟ್ಟಿರುವ ದೃಶ್ಯಗಳು ಇತ್ತೀಚೆಗೆ ಕಂಡು ಬರುತ್ತಿವೆ ಎಂದು ಹೇಳಿದರು.
ಬಾಗುತ್ತಾನೆ: ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ, ಸಮಾಜದಲ್ಲಿರುವ ಮಾನವನು ಯಾರಿಗೂ ಬಾಗದೇ ತನ್ನನ್ನು ತಾನೇ ಮೇಲೆಂಬ ಭಾವನೆಯಿಂದ ವರ್ತಿಸುತ್ತಿರುತ್ತಾನೆ. ಆದರೆ ಮಾನವನ ಮನಸ್ಸು ಮತ್ತು ವಯಸ್ಸು ಕೂಡಿದರೆ ಮಾತ್ರ ಬಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.
ಕನಕದಾಸರು ಏಕವ್ಯಕ್ತಿತ್ವವನ್ನು ಬೆಳೆಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆದ ದಾಸ ಶ್ರೇಷ್ಠರಲ್ಲಿ ಪ್ರಮುಖರಾಗಿದ್ದು, ವಿಜಯನಗರದ ಶ್ರೀಕೃಷ್ಣದೇವರಾಯರ ಸಾಮ್ರಾಜ್ಯದ ವೈಭವವನ್ನು ಸಾರಿದ ಏಕೈಕ ಸಂತರೆಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕಾಳಿದಾಸ ಪ.ಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ. ಯತಿರಾಜು, ನಿವೃತ್ತ ಉಪನ್ಯಾಸಕ ಎಂ. ನಾರಾಯಣ್ ಹಾಗೂ ನಿವೃತ್ತ ಪದವೀಧರ ದೈಹಿಕ ಶಿಕ್ಷಕ ಲಕ್ಷ್ಮೀನರಸಿಂಹಯ್ಯರವರಿಗೆ ಸನ್ಮಾನಿಸಲಾಯಿತು.
ಡಿ.ಎಂ ಪಾಳ್ಯದ ಬಿಂದುಶೇಖರ್ ಒಡೆಯರ್, ಎಸ್. ನಾಗಣ್ಣ, ವಕೀಲರಾದ ಆರ್. ಓಂಕಾರಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ, ಸಾಹಿತಿ ವಿದ್ಯಾವಾಚಸ್ಪತಿ ಕವಿತಾಕೃಷ್ಣ, ತಿಪಟೂರು ತಾ.ಪಂ ಅಧ್ಯಕ್ಷ ಹಾಲ್ಕುರಿಕೆ ಭಾನುಪ್ರಕಾಶ್, ಶಿರಾದ ಸುಧಾ ಕ್ಲಿನಿಕ್ ಡಾ. ಮಂಜುನಾಥ್, ಪ್ರಾಂಶುಪಾಲ ಬೆಟ್ಟಲಿಂಗೆಗೌಡ ಎನ್.ಹೆಚ್. ಕೆಂಪಯ್ಯ ಹಾಗೂ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ಉಪಸ್ಥಿತರಿದ್ದರು.
ಕರವೇ ಜಿಲ್ಲಾಧ್ಯಕ್ಷ ಟಿ.ಇ ರಘುರಾಂ ಹಾಗೂ ಯುವ ಮುಖಂಡ ರಾಮಲಿಂಗಯ್ಯ ಮಕ್ಕಳಿಗೆ ಸಿಹಿ ಮತ್ತು ಪುಸ್ತಕ ವಿತರಣೆ ಮಾಡಿದರು.