ದಲಿತ ವಿದ್ಯಾರ್ಥಿಗಳ ಮೊಕದ್ದಮೆ ಹಿಂಪಡೆಯಲು ಮನವಿ
ಕ.ಪ್ರ. ವಾರ್ತೆ ತುಮಕೂರು ಆ.12
ಏಕಾಏಕಿ ವಿದ್ಯಾರ್ಥಿಗಳ ಸೀಟು ಕಡಿತಗೊಳಿಸಿದ ಅಂದಿನ ಕುಲಪತಿ ಡಾ. ಎಸ್.ಸಿ. ಶರ್ಮ ವಿರುದ್ಧ ಹೋರಾಟ ಮಾಡಿದ್ದ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಹೂಡಿದ್ದ ದಾವೆ ಹಿಂಪಡೆಯಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸ್ನಾತಕೋತ್ತರ ಪದವೀದರ ವೇದಿಕೆ ನೂತನ ಕುಲಪತಿ ಡಾ. ರಾಜಾಸಾಬ್ ಅವರಿಗೆ ಮನವಿ ಮಾಡಿತು.
ಸೋಮವಾರ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಪದವೀಧರ ವೇದಿಕೆ ಅಧ್ಯಕ್ಷ ಕೊಟ್ಟ ಶಂಕರ್ ನೇತೃತ್ವದ ನಿಯೋಗ ನೂತನ ಕುಲಪತಿಗಳನ್ನು ಭೇಟಿ ಮಾಡಿ 2010 ರಲ್ಲಿ 17 ಮಂದಿ ವಿದ್ಯಾರ್ಥಿಗಳ ಮೇಲೆ ಹೂಡಿದ್ದ ಮೊಕದ್ದಮೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
2010 ರಲ್ಲಿ ತುಮಕೂರು ವಿವಿಯ ಅಂದಿನ ಕುಲಪತಿ ಏಕಾಏಕಿ ಸೀಟು ಕಡಿತಗೊಳಿಸಿದ್ದರಿಂದ ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಂಚಕಾರ ಬಂದಿತ್ತು. ಈ ಸಂದರ್ಭದಲ್ಲಿ ಅಂದಿನ ಕುಲಪತಿ ವಿರುದ್ಧ ದಲಿತ ವಿದ್ಯಾರ್ಥಿಗಳು ಧರಣಿ ನಡೆಸಿದರು. ಆ ಸಂದರ್ಭದಲ್ಲಿ ಲಾಠಿ ಛಾರ್ಜ್ ನಡೆಸಿ ಚೆದುರಿಸಲಾಯಿತು.
ಇದನ್ನು ವಿರೋಧಿಸಿ 23 ದಿವಸಗಳ ಕಾಲ ತುಮಕೂರು ವಿವಿ ಕುಲಪತಿ ವಿರುದ್ಧ ವಿವಿ ಮುಂದೆ ಪ್ರತಿಭಟನೆ ಮಾಡಲಾಯಿತು. ಆಗ ಹೋರಾಟ ಹತ್ತಿಕ್ಕಲು 17 ಸ್ನಾತಕೋತ್ತರ ವಿದ್ಯಾರ್ಥಿಗಳ ಮೇಲೆ ಕೇಸು ಹಾಕಲಾಗಿತ್ತು. ಹೀಗಾಗಿ ಅವರ ಭವಿಷ್ಯಕ್ಕೆ ಸಂಚಕಾರ ಬಂದಿತ್ತು.
ಹೀಗಾಗಿ ಶೋಷಿತ ವರ್ಗದ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಾಗಿದ್ದು ಅದನ್ನು ಹಿಂಪಡೆಯುವ ಮೂಲಕ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನೆರವಾಗಬೇಕೆಂದು ನೂತನ ಕುಲಪತಿ ರಾಜಾಸಾಬ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಾ. ರಾಜಾಸಾಬ್ ಅವರು ಈ ಕೇಸಿಗೆ ಸಂಬಂಧಿಸಿದಂತೆ ಶೀಘ್ರವೇ ಸಭೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ವಿ. ರಮೇಶ್, ಹರೀಶ್ ಕರಣಕುಪ್ಪೆ, ಮುರುಳಿ ಕುಂದೂರು, ಶಿವಾನಂದ, ಜಾನಿ, ರಂಗಸ್ವಾಮಿ ಮುಂತಾದವರು ಇದ್ದರು.