ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಸಭೆಗೆ ರೇವಣ್ಣ!

Rashmi Kasaragodu
Updated On : 13 Aug 2013, 12:06 pm

ಕ.ಪ್ರ.ವಾರ್ತೆ     ಕುಣಿಗಲ್     ಆ.12
ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ತಾವು ಯಾವ ಪಕ್ಷ ಬೆಂಬಲಿಸಬೇಕೆಂದು ತೀರ್ಮಾನ ಕೈಗೊಳ್ಳಲು ಸೋಮವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಸಭೆಗೆ, ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರೆ, ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯಹಿನ್ನೆಲೆಯ್ಲಲಿ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ತಾವು ಯಾವ ಪಕ್ಷ ಬೆಂಬಲಿಸಬೇಕು ಎಂಬ ಸಲುವಾಗಿ ಸೋಮವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ, ಬೆಂಬಲಿಗರ ಸಭೆ ಕರೆದಿದ್ದರು. ಸಭೆಯಲ್ಲಿ ಮೊದಲಿಗೆ ಕಾರ್ಯಕರ್ತರು ತಮ್ಮದೇ ಆದ ಅಭಿಪ್ರಾಯ ಮಂಡಿಸಿ ಕೊನೆಗೆ ತಮ್ಮ ಮುಖಂಡರು ಯಾವ ನಿರ್ಧಾರ ಕೈಗೊಂಡರೂ ಅವರ ಹಿಂದೆ ಬರುವುದಾಗಿ ಒಮ್ಮತದ ಬೆಂಬಲ ಸೂಚಿಸಿದರು, ಅಭಿಮಾನಿಗಳ, ಕಾರ್ಯಕರ್ತರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ ಮಾತನಾಡಿದ ಡಿ.ಕೃಷ್ಣಕುಮಾರ್, ಈ ಹಿಂದೆ ತಾಲೂಕಿನಲ್ಲಿ ಬಿಜೆಪಿಗೆ ಕೇವಲ ಸಾವಿರ ಮತಗಳಿದ್ದು, ತಾವು ಪಕ್ಷ ಸೇರ್ಪಡೆಗೊಂಡ ನಂತರ ಮತಗಳನ್ನು ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಬರುವಂತೆ ಮಾಡಿ ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದೇನೆ. ಆದರೆ ಪಕ್ಷದ ರಾಜ್ಯಮಟ್ಟದ ಮುಖಂಡರು ಪದಾಧಿಕಾರಿಗಳು ತಾಲೂಕು ಮಟ್ಟದ ನಾಯಕರನ್ನು ಕಡೆಗಣಿಸಿ, ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ದಿಢೀರ್ ಪ್ರವೇಶ: ಸಭೆ ನಡೆಯುತ್ತಿರುವ ಸಂದರ್ಭದಲ್ಲೆ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ದಿಢೀರ್ ಪ್ರವೇಶ ಮಾಡಿದ್ದು ಕಾರ್ಯಕರ್ತರು ಬೆಂಬಲಿಗರಲ್ಲಿ ಅಚ್ಚರಿ ಜೊತೆ, ಹಲವು ಗೊಂದಲ ಸಹ ಮೂಡಿಸಿತು. ಆದರೆ, ರೇವಣ್ಣನವರನ್ನು ಕುರಿತು ಕೆಲ ಮುಖಂಡರು, ಜೆಡಿಎಸ್ ಪಕ್ಷ ಬೆಂಬಲಿಸಲೇ ಬೇಕಿದ್ದಲ್ಲಿ ತಮ್ಮ ನಾಯಕರಾದ ಡಿ.ಕೃಷ್ಣಕುಮಾರ್ ಅವರನ್ನು ಎಂಎಲ್ಸಿ ಮಾಡಬೇಕು ಮತ್ತು ಮುಂಬರುವ ಕುಣಿಗಲ್ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಟಿಕೆಟ್ ನೀಡುವಂತೆ ಆಗಹಿಸಿದರು. ಈ ಹಿಂದಿನ ಚುನಾವಣೆಗಳಲ್ಲಿ ಬೇರೆ ಮುಖಂಡರಿಗೆ ಮಾಡಿದ ರೀತಿಯಲ್ಲಿ ಬಿ ಫಾರಂ, ಸಿ ಫಾರಂ ತಂತ್ರಗಾರಿಕೆ ನಡೆಸುವುದಾದರೆ ನಿಮ್ಮ ಸಹವಾಸವೇ ಬೇಡ ಎಂದರು.
ಕೃಷ್ಣಕುಮಾರ್ಗೆ ಶ್ಲಾಘನೆ: ಕಾರ್ಯಕರ್ತರು, ಬೆಂಬಲಿಗರ ಮಾತಿಗೆ ಬೇಸರಿಸಿಕೊಳ್ಳದ ಎಚ್.ಡಿ. ರೇವಣ್ಣ, ತಾವು ಡಿ.ಕೃಷ್ಣಕುಮಾರ್ ಅವರ ಸಂಘಟನಾ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವಾರಾಗಿದ್ದು, ಅವರ ಸರ್ವತೊಮುಖ ರಾಜಕೀಯ ಏಳಿಗೆಗೆ ಶ್ರೀರಕ್ಷೆಯಾಗಿ ನಿಂತು ಶ್ರಮಿಸುವ ಭರವಸೆ ನೀಡಿದರು. ಈ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಆದರೆ ಡಿ.ಕೃಷ್ಣಕುಮಾರ್ ಸ್ಥಳದಲ್ಲೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ, ತಮ್ಮ ನಿಲುವನ್ನು ಇನ್ನು ಬಹಿರಂಗಗೊಳಿಸದೆ ಗುಪ್ತವಾಗಿರಿಸಿದರು. ಈ ಮಧ್ಯೆ ಅವರ ಬಹುತೇಕ ಬೆಂಬಲಿಗರು ಡಿ.ಕೃಷ್ಣಕುಮಾರ್ ಜೆಡಿಎಸ್ ಬೆಂಬಲಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ. ಮುಖಂಡರಾದ ಚಿಕ್ಕರಾಮಯ್ಯ, ನಾರಾಯಣಗೌಡ, ಬಲರಾಮ್, ನಡೇಮಾವಿನಪುರ ರಂಗಸ್ವಾಮಿ,ತಿಮ್ಮೇಗೌಡ, ಅರುಣಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಬೆಂಬಲಿಗರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement