ಮುದ ನೀಡಿದ ಹಿರಿಯರ ಕ್ರೀಡಾಕೂಟ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟವನ್ನು ರೋಟರಿ ಅಧ್ಯಕ್ಷ ಸಿ.ಎನ್.ಪ್ರದೀಪ್ ಕುಮಾರ್ ಉದ್ಘಾಟಿಸಿದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಇದೊಂದು ಅವಿಸ್ಮರಣೀಯ ದಿನ. ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ 91 ವರ್ಷದ ಹೆಗ್ಗಳಿಕೆ ಸಂಜೀವಯ್ಯನವರದಾದರೆ, ಮೂರು ಕ್ರೀಡೆಗಳಲ್ಲಿ ಬಹುಮಾನ ಬಾಚಿದ 76 ವರ್ಷದ ಅನ್ನಪೂರ್ಣಜ್ಜಿಯವರು ತಮ್ಮ ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಕ್ರೀಡಾ ಕೂಟದಲ್ಲಿ ವೇಗದ ನಡಿಗೆ, ನಾಣ್ಯ ಚಿಮ್ಮುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವುದು, ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪಟ್ಟಣದ ಹಿರಿಯರ ವೇದಿಕೆ ಕಳೆದ ನಾಲ್ಕು ವರ್ಷಗಳಿಂದ ಸ್ವಾತಂತ್ರೋತ್ಸವದ ಅಂಗವಾಗಿ ಹಿರಿಯ ಜೀವಿಗಳು ಸ್ವಪ್ರೇರಣೆಯಿಂದ ನಡೆಸಿಕೊಂಡು ಬರುತ್ತಿದ್ದು, ಯುವಕರಿಗೆ ಸೆಡ್ಡು ಹೊಡೆದಿದ್ದಾರೆ. ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಕ್ರೀಡಾಳುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಾಕ್ಷಿಯಾಗಿದೆ ಎಂದರು.