ಹೇಮಾವತಿ ನೀರು ಹರಿಸಿ
ಕ.ಪ್ರ. ವಾರ್ತೆ ತಿಪಟೂರು ಆ.12
ಕಸ್ಪತರು ನಾಡು ತಿಪಟೂರು ತಾಲ್ಲೂಕು ಕಳೆದ 5-6 ವರ್ಷಗಳಿಂದ ಮಳೆ ಇಲ್ಲದೆ ತೀವ್ರ ಬರಗಾಲಕ್ಕೀಡಾಗಿದೆ. ಇಲ್ಲಿನ ಪ್ರಮುಖ ಜೀವನಾಧಾರಿತ ವಾಣಿಜ್ಯ ಬೆಳೆ ತೆಂಗು ನೆಲಕಚ್ಚಿದೆ. ಈ ವರ್ಷವಂತೂ ತಾಲೂಕಿನಲ್ಲಿ ಲಕ್ಷಾಂತರ ತೆಂಗಿನ ಮರಗಳು ನೀರಿಲ್ಲದೆ ಒಣಗಿ ಸುಳಿ ಬಿದ್ದು ಹೋಗಿರುವುದು ರೈತರಲ್ಲಿ ಭಯ ಹುಟ್ಟಿಸಿದೆ. ಅಲ್ಲದೆ ನಾನಾ ರೋಗರುಜಿನಗಳಿಗೆ ಮರಗಳು ತುತ್ತಾಗಿದ್ದು, ಲಕ್ಷಾಂತರ ಮರಗಳು ಫಲವಿಲ್ಲದೆ ಗರಬಡಿದಂತೆ ನಿಂತಿದ್ದು ಸರ್ಕಾರ ಈ ಕೂಡಲೆ ರೈತರ ನೆರವಿಗೆ ಧಾವಿಸಬೇಕೆಂದು ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕು ಕೆಜೆಪಿ ವತಿಯಿಂದ ತಾಲೂಕನ್ನು ಬರಗಾಲ ಎಂದು ಘೋಷಿಸುವುದು, ಹೇಮಾವತಿ ನೀರು ಹರಿಸುವುದು, ತೆಂಗಿನ ಮರಕ್ಕೆ ಸೂಕ್ತ ಪರಿಹಾರ ಮತ್ತು ರೈತ ಸಮಸ್ಯೆಗಳ ಪರ ಸೋಮವಾರ ಬರದ ಹೋಬಳಿ ಹೊನ್ನವಳ್ಳಿಯಿಂದ ತಿಪಟೂರುವರೆಗೂ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು ಇಲ್ಲಿನ ಪ್ರಮುಖ ಪಶುಪಾಲನೆಗೆ ಮೇವು, ನೀರಿಲ್ಲದೆ ರೈತರು ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ. ಬೋರ್ವೆಲ್ಗಳಲ್ಲಿ ನೀರು ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ. ಸಿಕ್ಕಿದರೂ ನೀರನ್ನು ಮೇಲೆತ್ತಲಾಗುತ್ತಿಲ್ಲ. ಆದ್ದರಿಂದ ಕೂಡಲೆ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸಬೇಕಲ್ಲದೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಗಿ ಬಿತ್ತಿಲ್ಲ: ಜಿಲ್ಲಾ ಬಸವ ಸೇನೆ ಅಧ್ಯಕ್ಷ ಗಂಗರಾಜು ಮಾತನಾಡಿ ಈ ವರ್ಷವೂ ಸಕಾಲಕ್ಕೆ ಸರಿಯಾಗಿ ಮಳೆ ಆಗದ ಕಾರಣ ಆಹಾರ ಬೆಳೆಯಾದ ರಾಗಿಯನ್ನು ಬಿತ್ತಲಾಗಿಲ್ಲ. ಮುಂಗಾರು ಬೆಳೆಗಳಾದ ಹೆಸರು, ಉದ್ದು,
ತೊಗರಿ, ಎಳ್ಳಿನಂತ ಬೆಳೆಗಳು ಬಿತ್ತಿಸಿಕೊಂಡಿದ್ದು ಬಿಟ್ಟರೆ, ಹುಟ್ಟಲು ಮಳೆಯೇ ಬರಲಿಲ್ಲ. ಹೀಗೆ ತಾಲ್ಲೂಕಿನ ಬರಗಾಲ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಳೇ ಸಾಲದು. ಆದ್ದರಿಂದ ತಾವು ಕೂಡಲೆ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ತಾಲ್ಲೂಕಿಗೆ ವಿಶೇಷ ಪ್ಯಾಕೆಜಜ್ರೂಪಿಸಬೇಕೆಂದರು.
ಕೆಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಲದಹಳ್ಳಿ ವಿಶ್ವನಾಥ್ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಕಾಲದಲ್ಲಿ ಮಾಡಲ್ಪಟ್ಟ ಹೊನ್ನವಳ್ಳಿ, ತಿಪಟೂರು, ರಂಗಾಪುರ, ಕಟ್ಟಿಗೇನಹಳ್ಳಿ, ಬಿಳಿಗೆರೆ ಏತ ನೀರಾವರಿಗಳಿಂದ ಸಂಬಂಧಪಟ್ಟ ಕೆರೆಗಳಿಗೆ ಈವರೆಗೂ ನೀರು ತುಂಬಿಸಿಲ್ಲ. ಆದ್ದರಿಂದ ಕೂಡಲೆ ತುಂಬಿ ಹರಿಸುತ್ತಿರುವ ಹೇಮಾವತಿ ನೀರನ್ನು ಸಂಬಂಧಪಟ್ಟ ಎಲ್ಲಾ ಕೆರೆಗಳಿಗೂ ಶೀಘ್ರವಾಗಿ ಹರಿಸಬೇಕು. ಶಾಸಕರು ಹೇಮಾವತಿ ನೀರನ್ನು ಸಕಾಲಕ್ಕೆ ಕೆರೆಗಳಿಗೆ ಹರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ತಾಲೂಕಿನ ರೈತರ ದುರಂತ ಎಂದರು. ಜೊತೆಗೆ ಹೇಮಾವತಿ ನೀರಿನಿಂದ ವಂಚಿತವಾಗಿರುವ ತಾಲೂಕಿನ ಇನ್ನಿತರೆ ಕೆರೆಗಳಿಗೆ ಹೊಸದಾಗಿ ನೀರು ಬಿಡಲು ಯೋಜನೆ ಕೈಗೆತ್ತಿಕೊಳ್ಳಬೇಕು.
ಬರ: ತಾಲೂಕು ಕೆಜೆಪಿ ಮುಖಂಡ ರಂಗಾಪುರ ದೇವರಾಜು ಮಾತನಾಡಿ ತೀವ್ರ ಬರದ ಹಿನ್ನೆಲೆಯಲ್ಲಿ ಒಣಗಿರುವ ಮತ್ತು ಬಿದ್ದು ಹೋಗಿರುವ ತೆಂಗಿನ ಮರಗಳಿಗೆ ಕನಿಷ್ಠ 5 ಸಾವಿರ ರು.ಪರಿಹಾರ ನೀಡುವುದು. ಹೊಸದಾಗಿ ತೆಂಗು ಹಾಕಲು ಗಿಡವೊಂದಕ್ಕೆ ರು. 300 ಹಣ ನೀಡುವುದು. ತಾಲೂಕಿನ ರೈತರ ಬೆಲೆ ಮತ್ತು ತೆಂಗು ಬೆಳೆ ಸಾಲ ಮನ್ನಾ, ಡಿ.ಎಲ್.ಡಿ. ಬ್ಯಾಂಕಿನಲ್ಲಿ ನೀಡಿರುವ ರೈತರ ಸಾಲಗಳನ್ನು ಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಧರಣಿ: ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಲ್ಲಿ ರೈತರು, ಸಾರ್ವಜನಿಕರು, ಮಹಿಳೆಯರು, ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಮಧ್ಯಾಹ್ನ 3ಗಂಟೆವರೆಗೂ ಧರಣಿ ನಡೆಸಿ ನಂತರ ಮನವಿ ಪತ್ರವನ್ನು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ನಗರಸಭಾ ಸದಸ್ಯರಾದ ನಿಜಗುಣ, ಯದುನಂದನ, ರಾಜು, ತಾ.ಅಧ್ಯಕ್ಷ ರಘುಪತಿ, ಕರಡಿ ರೈತ ಸೇವಾ ಬ್ಯಾಂಕಿನ ಅಧ್ಯಕ್ಷ ಕೆ.ಆರ್. ದೇವರಾಜು, ಮುಖಂಡರುಗಳಾದ ಕಿಬ್ಬನಹಳ್ಳಿ ಬಸವಣ್ಣ, ಸೀಗೆಪಾಳ್ಯ ಲೋಕೇಶ್, ರೇಣು, ಭೈರನಾಯಕನಹಳ್ಳಿ ರವಿ, ಎಲ್. ಪಿ. ಯದುನಂದನ ಮತ್ತಿತರಿದ್ದರು.
ವಿಶೇಷ ಪ್ಯಾಕೇಜ್ ನೀಡಿ
ಕೆಜೆಪಿ ಮುಖಂಡ ಲೋಕೇಶ್ವರ ಮಾತನಾಡಿ ತಿಪಟೂರು ನಗರದ ರಸ್ತೆಗಳಿಗೆ ಕೂಡಲೆ ಡಾಂಬರೀಕರಣ, ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು 2ನೇ ಹಂತದ ಹೇಮಾವತಿ ನೀರು ಪೂರೈಕೆ ಕೈಗೊಳ್ಳುವುದು. ಸರ್ಕಾರಿ ಪದವಿ ಕಾಲೇಜಿಗೆ ಅವಶ್ಯ ಕೊಠಡಿಗಳನ್ನು ಮಾಡಿಕೊಡುವುದು. ತಾಲೂ ಕನ್ನು ಬರಗಾಲ ಎಂದು ತೀರ್ಮಾನಿಸಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ನಗರ ಹಾಗೂ ಗ್ರಾಮೀಣ ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂಬ ಹತ್ತು ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರ ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದಲ್ಲಿ ತಿಪಟೂರು ಬಂದ್ ಸೇರಿದಂತೆ ರಸ್ತೆ ತಡೆ ಚಳುವಳಿಗಳನ್ನು ಹಮ್ಮಿಕೊಳ್ಳುವ ಮೂಲಕ ಉಗ್ರ ಹೋರಾಟಕ್ಕೆ ಮುಂದಾಗಲಿದ್ದೇವೆಂದು ತಿಳಿಸಿದರು. ತಾಲೂಕಿನ ಶಾಸಕರು ರೈತಪರ ಯೋಜನೆಗಳನ್ನು ಕೈಗೊಳ್ಳಲು ನಮ್ಮ ಸಹಕಾರ ಯಾವಾಗಲೂ ಇರುತ್ತದೆಂದು ತಿಳಿಸಿದರು.