ಬ್ಯಾಂಕ್ ಹಣ ದುರುಪಯೋಗ: ಶಿಕ್ಷೆ, ದಂಡ
ಕುಣಿಗಲ್: ಬ್ಯಾಂಕಿನ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನೌಕರರೊಬ್ಬರಿಗೆ, ನ್ಯಾಯಾಧೀಶರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 1998ನೇ ಸಾಲಿನಲ್ಲಿ ಶೇಷಾದ್ರಿ ಮತ್ತು ಶಿವಣ್ಣ ಎಂಬ ನೌಕರರು 3,85,767 ರು.ಗಳನ್ನು ದುರುಪಯೋಗ ಮಾಡಿದ್ದಾರೆಂದು ಅಂದಿನ ಪಿಎಸೈ ಬಾಳೇಗೌಡ ಪ್ರಕರಣ ದಾಖಲಿಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಆರ್. ಶಾರದ ಪ್ರಕರಣದ ಎರಡನೇ ಆರೋಪಿ ಶಿವಣ್ಣ ಎಂಬಾತನಿಗೆ ಮೂರು ವರ್ಷ ಸಾದಾ ಶಿಕ್ಷೆ ಮತ್ತು ಐದು ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದು, ಎಪಿಪಿ ಸುರೇಖಾ ಹಿರೇಮಠ ವಾದ ಮಂಡನೆ ಮಾಡಿದ್ದರು.