ವಿದ್ಯುನ್ಮಾನ ಮಾಧ್ಯಮದಿಂದ ಜಾನಪದ ಕಲೆಗೆ ಹೊಡೆತ
ಕ.ಪ್ರ.ವಾರ್ತೆ ಮಧುಗಿರಿ ಆ. 13
ಇಂದಿನ ವಿದ್ಯುನ್ಮಾನ ಮಾಧ್ಯಮದಿಂದ ಜನಪದ ಕಲೆ ನಶಿಸುತ್ತಿದೆ. ಆರೋಗ್ಯಕರ ಚಿಂತನೆ, ಸದಭಿರುಚಿಯಿಂದ ಕೂಡಿರುವ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಜಾನಪದ ಸಾಂಸ್ಕೃತಿಕ ಉತ್ಸವ ಬಹಳ ಮಹತ್ವದ್ದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ನುಡಿದರು.
ಸೋಮವಾರ ತಾಲೂಕಿನ ಅರಳಾಪುರ ಚಾಮುಂಡೇಶ್ವರಿ ಗ್ರಾಮೀಣ ಜನಪದ ಕಲಾವೃಂದ ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಪುರವರ ಗ್ರಾಮದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 12ನೇ ವರ್ಷದ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜನಪದರ ನೋವು-ನಲಿವು ಕಲೆಯ ಮೂಲಕ ಜೀವಂತಗೊಳ್ಳುತ್ತದೆ ಎಂದರು.
ಪಪೂ ಕಾಲೇಜು ಪ್ರಾಂಶುಪಾಲ ಕೆ.ಕೃಷ್ಣಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಲಾವದರನ್ನು ಪ್ರೋತ್ಸಾಹಿಸುವುದರಿಂದ ಜನಪದ ಕಲೆಯನ್ನು ಪುನರುಜ್ಜೀವನಗೊಳಿಸಬೇಕಿದೆ ಎಂದರು. ಹಿರಿಯ ಸಾಹತಿ ಪ್ರೊ.ಮ.ಲ.ನ.ಮೂರ್ತಿ ಗಡಿನಾಡಿನ ಜನಪದ ಕಲೆಗಳು ಶ್ರಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಸಮಾಜದ ತಳ ಪದರದವರು ಜನಪದ ಕಲೆಯ ಮೂಲವನ್ನು ಕಟ್ಟಿ ಕೊಟ್ಟವರು ಎಂದರು.
ತಾ.ಉಪನ್ಯಾಸಕ ಸಂಘದ ಅಧ್ಯಕ್ಷ ರಂಗಪ್ಪ ಗಡಿನಾಡ ಜನಪದ ಬದುಕು ಕುರಿತು ಕಲೆ ಬೆವರ ಫಲ ಎಂದರು.
ಜಿ.ಪಂ.ಸದಸ್ಯ ಮಂಜುಳಾ ವೀರೇಂದ್ರ ಪ್ರಸಾದ್ ಮಾತನಾಡಿ, ತತ್ವಪದ, ಸೋಭಾನೆ, ಗೊರವರಪದ, ಭಜನೆಗಳು ನನ್ನ ಬಾಲ್ಯದ ನೆನಪುಗಳನ್ನು ತಂದು ಕೊಟ್ಟವು. ತಮಟೆ ಗಾರುಡಿ ಗೊಂಬೆ, ನಾಸಿಕ್ ಡೋಲ್ಗಳಂಥ ವಾದ್ಯಗಳನ್ನು ಮತ್ತೆ ನೋಡುವ ಅವಕಾಶವನ್ನು ಕಲ್ಪಿಸಿದ ಅರಳಾಪುರ ರಾಮಚಂದ್ರಪ್ಪ ಅವರ ಕಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜವಾಬ್ದಾರಿ ಎಲ್ಲರ ಮೇಲಿದೆ: ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ ನಮ್ಮ ಜನಪದ ಸಂಸ್ಕೃತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಉಪಾಧ್ಯಕ್ಷೆ ಸಿದ್ದಾಗಂಗಾಂಭಿಕೆ, ಸದಸ್ಯ ರಾಮಾಂಜಿನಮ್ಮ, ಮಂಜುಳಾ, ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಮುಖ್ಯ ಶಿಕ್ಷಕ ಪಾತಲಿಂಗಪ್ಪ, ಪಿ.ಎನ್.ಈರಣ್ಣ, ಸತೀಶ್ ಕುಮಾರ್, ಹನುಮಂತರಾಜು, ಎಸ್.ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ.ಅಧ್ಯಕ್ಷೆ ಕದರಮ್ಮ ಅಧ್ಯಕ್ಷತೆ ವಹಿಸಿದ್ದರು. ಹನೀಫ್ ಪ್ರಾರ್ಥಿಸಿದರು. ಕಲಾ ಸಂಘದ ಕಾರ್ಯದರ್ಶಿ ಅರಳಾಪುರ ರಾಮಚಂದ್ರಪ್ಪ ಸ್ವಾಗತಿಸಿ ಉಪನ್ಯಾಸಕ ಗೋಪಾಲ್ ನಿರೂಪಿಸಿ ವಂದಿಸಿದರು.