ಸಿದ್ದರಾಮಯ್ಯ ಸಿಎಂ ಸ್ಥಾನದ ಘನತೆ, ಗೌರವ ಕಾಪಾಡಲಿ
ಕ.ಪ್ರ.ವಾರ್ತೆ ಕುಣಿಗಲ್ ಆ. 13
ಸಿದ್ದರಾಮಯ್ಯ ಜೆಡಿಎಸ್ ಪಾಳೆಯದಿಂದಲೆ ಬೆಳೆದು ಮೇಲಕ್ಕೆ ಬಂದಿದ್ದು, ಈಗ ಕಂಡ, ಕಂಡ ಕಡೆಯಲೆಲ್ಲಾ ನನ್ನ ಹಾಗೂ ಜೆಡಿಎಸ್ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಸ್ಥಾನದ ಘನತೆ, ಗೌರವ, ಗಾಂಭೀರ್ಯಕ್ಕೆ ತಕ್ಕಂತೆ ನಡೆದುಕೊಂಡು ಇನ್ನಾದರೂ ಈ ರೀತಿ ಮಾತನಾಡುವುದನ್ನು ನಿಲ್ಲಿಸಿದರೆ ಅವರಿಗೆ ಒಳ್ಳೆಯದೆಂದು ಮಾಜಿ ಪ್ರದಾನಿ ದೇವೇಗೌಡ ಗುಡುಗಿದರು.
ಮಂಗಳವಾರ, ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಪರ, ಹುತ್ರಿದುರ್ಗ, ಕಸಬಾ, ಕೊತ್ತಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಲು ಅಗಮಿಸಿ, ಶಾಸಕ ಡಿ. ನಾಗರಾಜಯ್ಯನವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ತಮ್ಮ ಬಗ್ಗೆ, ಪಕ್ಷದ ಬಗ್ಗೆ ತುಂಬ ಹಗುರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಕೊಡುವುದು ನನಗೂ ಗೊತ್ತಿದೆ. ಆದರೆ, ತಾಳ್ಮೆಯಿಂದ ಎಲ್ಲವನ್ನು ಗಮನಿಸುತ್ತಿದ್ದೇನೆ ಎಂದರು.
ತಾಯಿ-ಮಗನ ಪಕ್ಷ ಸೇರಿದ್ದಾರೆ: ಮಾತು ಮಾತಿಗೂ ಅಪ್ಪಮಕ್ಕಳ ಪಕ್ಷವೆಂದು ಟೀಕಿಸುತ್ತಿರುವ ಸಿದ್ದರಾಮಯ್ಯ, ಅಪ್ಪಮಕ್ಕಳ ಪಕ್ಷ ಬಿಟ್ಟು ತಾಯಿಮಗನ ಪಕ್ಷ ಸೇರಿದ್ದಾರೆ. ಅಪ್ಪ ಮಕ್ಕಳ ಪಕ್ಷದಲ್ಲಿ ಕಾಲಮೇಲೆ ಕಾಲುಹಾಕಿಕೊಂಡು ಕೂರುತ್ತಿದ್ದ ಇದೇ ಸಿದ್ದರಾಮಯ್ಯ, ಇಂದು ತಾಯಿ ಮಗನ ಪಕ್ಷದಲ್ಲಿ ಅವರ ಮನೆಬಾಗಿಲ ಬಳಿ ನಿಲ್ಲುವ ಸ್ಥಿತಿಯಲ್ಲಿದ್ದಾರೆ.
ಇನ್ನು ವಂಶಪರಂಪರೆಯಿಂದ ಆಡಳಿತ ನಡೆಸುತ್ತಿದ್ದಾರೆಂದು ಹೇಳುತ್ತಾರೆ, ದೇವೆಗೌಡ ಸಾಮಾನ್ಯ ರೈತನ ಮಗ, ಆದರೆ ವಂಶಪರಂಪರೆಯಿಂದ ಆಡಳಿತ ನಡೆಸುವವರು ಯಾರೆಂದು ಜನಕ್ಕೆ ಗೊತ್ತಿದೆ. ಇಂದು ಜೆಡಿಎಸ್-ಬಿಜೆಪಿ ಅಕ್ರಮ ಮೈತ್ರಿ ಎಂದು ಬೊಬ್ಬಿಡುತ್ತಿರುವ ಸಿದ್ದರಾಮಯ್ಯ, 2008ರ ಮಧುಗಿರಿಚುನಾವಣೆಯಲ್ಲಿ ತಮ್ಮ ಹಿಂಬಾಲಕರ ಮೂಲಕ ಬಿಜೆಪಿಗೆ ಮತಹಾಕಿ ಎಂದು ಹೇಳಿರುವುದು ಜನ ಮರೆತಿಲ್ಲ ಎಂದರು.
ನನ್ನ ಪ್ರಶ್ನೆಗೆ ಉತ್ತರಿಸಲಿ: ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗ) ಮುಖಂಡರೆಂದು ಫೋಸು ಕೊಡುವ ಸಿದ್ದರಾಮಯ್ಯನವರಿಗೆ ನನ್ನ ಮೂರು ಪ್ರಶ್ನೆಗೆ ಉತ್ತರ ಕೊಡುವ ತಾಕತ್ತಿದ್ದರೆ, ಬಹಿರಂಗ ಉತ್ತರ ನೀಡಲಿ ಎಂದು ಸವಾಲು ಹಾಕಿದರು. ಮೊದಲ ಪ್ರಶ್ನೆ- ಖರ್ಗೆ ಕಾಂಗ್ರೆಸ್ ಪಕ್ಷದ ಧೀಮಂತನಾಯಕರಾಗಿದ್ದು 9 ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದ್ದು, ಸಿಎಂ ಆಯ್ಕೆ ಸಂದರ್ಭದಲ್ಲಿ ಖರ್ಗೆಯವರು ಸಿಎಂ ಗಾದಿಗೆ ಆಕಾಂಕ್ಷಿತರಾಗಿದ್ದರು. ಸಿದ್ದರಾಮಯ್ಯನವರೇ ನೀವೇಕೆ ಅವರನ್ನು ಸಿಎಂ ಮಾಡಿ ಎಂದು ಹೇಳಲಿಲ್ಲ.
ಇನ್ನು ಎರಡನೇ ಪ್ರಶ್ನೆ- ಜಿ. ಪರಮೇಶ್ವರ ಸಹ ಸಿಎಂ ಗಾಧಿ ಆಕಾಂಕ್ಷಿಯಾಗಿದ್ದು, ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕಾರ್ಯಕರ್ತರು ಪ್ರತಿಭಟನೆ ಮಾಡಿದಾಗ, ಅವರನ್ನೇಕೆ ಡಿಸಿಎಂ ಮಾಡಲಿಲ್ಲ.
ಮೂರನೆಯದಾಗಿ ಅಜೀಂ ಅವರನ್ನು ಎಂಎಲ್ಸಿ ಮಾಡದಂತೆ ತಡೆದಿದ್ದು ಯಾಕೆಂಬುದಕ್ಕೆ ಉತ್ತರಿಸಿ ಎಂದರು. ಕೇವಲ ಮಾತಿನಲ್ಲಿ ಅಹಿಂದ ಮುಖಂಡನೆಂದರೆ ಸಾಲದು, ದಲಿತರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಖರ್ಗೆ ಅಥವಾ ಜಿ.ಪರಮೇಶ್ವರ್ ಅವರಿಗೆ ಸೂಕ್ತ ಸ್ಥಾನಮಾನ ಕೊಡಿಸಲಿ ಎಂದು ಸವಾಲು ಹಾಕಿ, ಪ್ರಸಕ್ತ ಚುನಾವಣೆಗಳಲ್ಲಿ ಜೆಡಿಎಸ್ ಅತ್ಯಧಿಕ ಮತಗಳಿಂದ ಗೆದ್ದು ಪುನರ್ ಜನ್ಮ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಶಾಸಕರಾದ ಡಿ.ನಾಗರಾಜಯ್ಯ,ಎಂ.ಟಿ. ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಕೆ.ಎಲ್. ಹರೀಶ್, ಜಿಪಂ ಸದಸ್ಯರಾದ ಡಾ.ಬಿ.ಎನ್.ರವಿ, ವೈ.ಎಚ್.ಹುಚ್ಚಯ್ಯ, ದೊಡ್ಡಯ್ಯ, ಮುಖಂಡರಾದ ಶಿವಣ್ಣ, ಮಲ್ಯನಾಗರಾಜ್, ಬಾಂಬೆ ಶಿವಣ್ಣ, ಜಗದೀಶ್, ಗುರುಪ್ರಸಾದ್, ನಾಗರಾಜ, ಪುರಸಭೆ ಸದಸ್ಯರಾದ ಆಯಿಶಾಬೀ, ಆಶ್ವಾಕ್, ಅನ್ಸರ್, ಈ.ಮಂಜು ಇತರರು ಉಪಸ್ಥಿತರಿದ್ದರು