ಆದಿವಾಸಿ ಸೋಲಿಗ ಸಮುದಾಯದಿಂದ ಪ್ರತಿಭಟನೆ
ಕ.ಪ್ರ.ವಾರ್ತೆ ತುಮಕೂರು ಆ. 14
ಆದಿವಾಸಿ ಸೋಲಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆದಿವಾಸಿ ರಕ್ಷಣಾ ಪರಿಷತ್ (ಸೋಲಿಗ) ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ನಗರದ ಟೌನ್ ಹಾಲ್ ವೃತ್ತದಿಂದ ಆಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪತ್ರಿಭಟನಾಕಾರರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಆದಿವಾಸಿಗಳು ವಾಸಿಸುತ್ತಿರುವ ಹನುಮಾಪುರ ಗ್ರಾಮಕ್ಕೆ ಸರಿಯಾಗಿ ಸರ್ಕಾರಿ ಸವಲತ್ತುಗಳು ಸಿಗುತ್ತಿಲ್ಲ. ಅನೇಕ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಕೇಳುವ ಸೌಜನ್ಯವನ್ನು ಸಹ ತೋರುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆದಿವಾಸಿ ರಕ್ಷಣಾ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ವಿ. ಶ್ರೀನಿವಾಸ್, ತುರುವೇಕೆರೆ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ವಾಸವಾಗಿರುವ ನಾವು ಆದಿವಾಸಿ ಬುಡಕಟ್ಟು ಸೋಲಿಗ ಸಮುದಾಯಕ್ಕೆ ಸೇರಿದ್ದು, ಅನೇಕರು ಕಡು ಬಡವರಿದ್ದಾರೆ. ಗ್ರಾಮದ ಸರ್ವೇ ನಂಬರ್ 74 ರಲ್ಲಿ 10 ಎಕರೆ 10 ಗುಂಟೆ ಸರ್ಕಾರಿ ಗೋಮಾಳವಿದೆ. ಅದರಲ್ಲಿ ನಾವು ಸುಮಾರು 30 ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ. ಆದರೆ ಅರಣ್ಯ ಇಲಾಖೆಯವರು ಸಂಬಂಧವಿಲ್ಲ ಜಾಗಕ್ಕೆ ಬಂದು ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರಿದರು.
ಕುಂಟು ನೆಪ: ನಮ್ಮ ಗ್ರಾಮಕ್ಕೆ ಹತ್ತು ವರ್ಷಗಳ ಹಿಂದೆ ಆಶ್ರಮ ಪಾಠಶಾಲೆ ಮಂಜೂರಾಗಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪಾಯ ಕಟ್ಟಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಅನೇಕ ಬಾರಿ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿ ನೀಡಿದರೂ ಸಹ ಯಾವುದೋ ಕುಂಟು ನೆಪ ಹೇಳಿ ಕಳುಹಿಸುತ್ತಾರೆ. ಇದರಿಂದ ನಮ್ಮ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪರದಾಡುವಂತಾಗಿದೆ ಎಂದು ಶ್ರೀನಿವಾಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಅದೇ ರೀತಿ ಆದಿವಾಸಿಗಳು ವಾಸಿಸುತ್ತಿರುವ ಕುಣಿಗಲ್ ತಾಲೂಕಿನ ಪಲ್ಲೇರಾಯನಹಳ್ಳಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಬೇಕು. ಅಭಿವೃದ್ಧಿಗೆ ಆದ್ಯತೆ ನೀಡುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಕೃಷ್ಣ, ರಾಜಣ್ಣ, ಗೋವಿಂದರಾಜು, ನಾರಾಯಣ್, ಮದ್ದೂರಯ್ಯ, ರಾಮು, ಮೂರ್ತಿ, ಬಸವರಾಜು, ಮೋಹನ್ ಕುಮಾರ್, ಮುದ್ದಮ್ಮ, ಕಾಳಮ್ಮ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.