ಸಂವಹನಕ್ಕಾಗಿ ಇಂಗ್ಲಿಷ್ ಉಪನ್ಯಾಸ ಕಾರ್ಯಕ್ರಮ
ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ವತಿಯಿಂದ ಸಂವಹನಕ್ಕಾಗಿ ಇಂಗ್ಲಿಷ್ ಎಂಬ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಿದ್ದಗಂಗಯ್ಯ ಹೊಲತಾಳ್ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಜಯದೇವಪ್ಪ ವಹಿಸಿದ್ದರು. ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಶಿವಪ್ರಸಾದ್, ಸಹ ಪ್ರಾಧ್ಯಾಪಕರಾದ ಪ್ರೊ. ಜ್ಯೋತಿ, ಡಾ.ಕೆ.ಬಿ.ಸರಸ್ವತಿ ಮತ್ತಿತರರಿದ್ದರು.
ಬಡರವರ ಕಷ್ಟ ಅರಿತು ಸಿದ್ದರಾಮಯ್ಯ ಉತ್ತಮ ಕೆಲಸ
ಕೊರಟಗೆರೆ: ಹಿಂದುಳಿದ ವರ್ಗದ ನೇತಾರರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನವರು ಬಡರವರ ಕಷ್ಟ ಅರಿತು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಕನಕ ಯುವಸೇನೆಯ ಅಧ್ಯಕ್ಷ ರಂಗಧಾಮಯ್ಯ ತಿಳಿಸಿದರು. ಅವರು ತಾಲೂಕಿನ ಚಿಂಪುಗಾನಹಳ್ಳಿಯಲ್ಲಿ ಕೊಳೆಗೇರಿಯ ಕಡುಬಡವರಿಗೆ ಸಿದ್ದರಾಮಯ್ಯನವರ 66 ನೇ ಹುಟ್ಟುಹಬ್ಬದ ಅಂಗವಾಗಿ ರಗ್ಗುಗಳನ್ನು ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ಯುವ ವೇದಿಕೆಯ ಅಧ್ಯಕ್ಷ ನಟರಾಜ್, ಕನಕ ಯುವ ಸೇನೆಯ ಗೌರವಾಧ್ಯಕ್ಷ ದೇವರಾಜು, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಶ್ರೀರಾಮಯ್ಯ, ಗ್ರಾ.ಪಂ ಸದಸ್ಯರಾದ ಕೆಂಪರಾಜು, ನಾಗೇಶ್, ಮುಖಂಡರಾದ ಎಸ್.ಎಲ್.ಎನ್ ಸ್ವಾಮಿ, ಉಮಾಶಂಕರ್, ಚಿಕ್ಕಣ್ಣ, ರಘು, ರಾಜಣ್ಣ ಸೇರಿದಂತೆ ಇತರರು ಇದ್ದರು.
ಹಸಿರು ಮೇವು ಉಚಿತ ವಿತರಣೆ
ಕೊರಟಗೆರೆ: ಪ್ರತಿ ವರ್ಷ ಬರಗಾಲದಲ್ಲಿ ರಾಸುಗಳಿಗೆ ಮೇವು ವಿತರಿಸುವಂತೆ ಈ ವರ್ಷವೂ ಪ್ರತಿನಿತ್ಯ ಕಳೆದ 2 ತಿಂಗಳಿನಿಂದ 30 ಕ್ಕೂ ಹೆಚ್ಚು ರೈತರ ರಾಸುಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಾಲಗಿರಿ ಕೃಷ್ಣಮೂರ್ತಿ ತಮ್ಮ ತೋಟದಿಂದ ಉಚಿತ ಹಸಿರು ಮೇವು ವಿತರಿಸಿದ್ದಾರೆ. ತಾಲೂಕಿನಲ್ಲಿ ಕಳೆದ 3 ವರ್ಷಗಳಿಂದ ಮಳೆಯಾಗದೆ ಬರಗಾಲದಿಂದ ತತ್ತರಿಸುತಿದ್ದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನೊಂದಿಗೆ ಸಾವಿರಾರು ಮಂದಿ ರೈತರು ತಮ್ಮ ರಾಸುಗಳಿಗೆ ಮೇವು ಇಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ತೋಟದಲ್ಲಿ ಬೆಳೆದ ಹಸಿರು ಮೇವನ್ನು ಗ್ರಾಮದ ರೈತರಿಗೆ ಪ್ರತಿನಿತ್ಯ ತಲಾ ಒಂದು ಹೊರೆಯಂತೆ ಕಟಾವು ಮಾಡಿಕೊಳ್ಳಲು ಕೃಷ್ಣಮೂರ್ತಿ ಕಳೆದ 2 ತಿಂಗಳಿನಿಂದ ಅವಕಾಶ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
'ಭಾರತದ ವಿಕಾಸ ಭಾರತದಿಂದಲೇ ಸಾಧ್ಯ'
ಮಧುಗಿರಿ: ಭಾರತದ ವಿಕಾಸ ಭಾರತದಿಂದಲೇ ಸಾಧ್ಯ, ಯಾವುದೇ ಒಂದು ದೇಶ ಮತ್ತೊಂದು ದೇಶವನ್ನು ವಿಕಾಸ ಮಾಡಿದ ಉದಾಹರಣೆ ಇಲ್ಲ ಎಂದು ಸ್ವದೇಶಿ ಜಾಗರಣ ಮಂಚ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಜಗದೀಶ್ ಹೇಳಿದರು.
ಇತ್ತಿಚೆಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ವರ್ತಕರ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಏರ್ಪಡಿಸಿದ್ದ ವರ್ತಕರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರ್ತಕರ ಸಂಘದ ಹಿರಿಯ ಮುಖಂಡ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ನಾಗೇಶ್, ವಿಜಯಕುಮಾರ್ ಗುಪ್ತ, ಎಂ.ಕೆ.ನಾಗರಾಜು, ಜಿ.ಆರ್.ಶ್ರೀನಾಥ್, ಬಿ.ಪಿ.ನಾರಾಯಣ್ ಮಾತನಾಡಿದರು. ವರ್ತಕರ ಸಂಘದ ಅಧ್ಯಕ್ಷ ಜಿ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕೆಂಚೇಶ್ ಸ್ವಾಗತಿಸಿ ವಂದಿಸಿದರು.