ಎಸ್ಬಿಎಂನಿಂದ ರು. 244 ಲಕ್ಷ ಕೃಷಿ ಸಾಲ
ಬಡತನವೆಂಬುದು ಬರೀ ಭ್ರಮೆ, ಶ್ರಮ ಪಟ್ಟು ದುಡಿದರೆ ಅದು ದಿಕ್ಕಾಪಾಲಾಗಿ ಓಡಿ ಹೋಗುತ್ತದೆ: ಶಂಕರ್ ರಾವ್ ಪ್ರತಿಪಾದನೆ
ಕ.ಪ್ರ.ವಾರ್ತೆ ತುರುವೇಕೆರೆ ಆ.15
ಸ್ಥಳೀಯ ಎಸ್ಬಿಎಂ ನೇತೃತ್ವದಲ್ಲಿ ಸುಮಾರು 149 ರೈತರಿಗೆ ವಿವಿಧ ಯೋಜನೆಯಡಿ ಸುಮಾರು 244 ಲಕ್ಷ ರು.ಗಳ ಸಾಲವನ್ನು ಬಿಡುಗಡೆ ಮಾಡಲಾಯಿತು.
ವಿರಕ್ತ ಮಠದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ನ ಎಜಿಎಂ ಶಂಕರ ರಾವ್ ಸಾಲ ಸೌಲಭ್ಯವನ್ನು ವಿತರಣೆ ಮಾಡಿದರು. ಸಾರ್ವಜನಿಕರನ್ನು ಕುರಿತು ಮಾತನಾಡಿದ ಅವರು ಬಡತನವೆಂಬುದು ಬರೀ ಭ್ರಮೆ ಮಾತ್ರ. ಶ್ರಮ ಪಟ್ಟು ದುಡಿದರೆ ಬಡತನವೆಂಬುದು ದಿಕ್ಕಾಪಾಲಾಗಿ ಓಡಿ ಹೋಗುವುದು.ದುಡಿದ ಹಣವನ್ನುಸದುಪಯೋಗ ಪಡಿಸಿಕೊಂಡು ಪುನರ್ ಅಭಿವೃದ್ಧಿಗೆ ವಿನಿಯೋಗಿಸಿದರೆ ದಿನೇ ದಿನೇ ಬಡತನ ಕ್ಷೀಣಿಸುತ್ತಾ ಆರ್ಥಿಕ ಅಭಿವೃದ್ಧಿ ತಂತಾನೇ ಲಭಿಸಲಿದೆ ಎಂದರು. ರಾಜ್ಯದಲ್ಲಿ ಸ್ತ್ರೀ ಸ್ವ ಸಹಾಯ ಸಂಘಗಳಿಗೆ ನೀಡಿರುವ ಸಾಲ ಶೇಕಡಾ 100 ರಷ್ಟು ಮರುಪಾವತಿಯಾಗಿದೆ. ಬ್ಯಾಂಕ್ನಿಂದ ಸಾಲ ಪಡೆದ ಮಹಿಳೆಯರು ಆರ್ಥಿಕಾಭಿವೃದ್ಧಿ ಸಾಧಿಸಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳು ರೈತರಿಗೆ ಸಾಲ ನೀಡುವುದಿಲ್ಲ ಎಂಬುದು ಸುಳ್ಳು. ಸೂಕ್ತ ದಾಖಲಾತಿಗಳನ್ನು ಪಡೆದು ಸಾಲ ನೀಡುತ್ತದೆ. ಅಲ್ಲದೇ ರೈತರಿಗೆ ಅಗತ್ಯವಿರುವಷ್ಟು ಮಾತ್ರ ಸಾಲ ನೀಡುತ್ತದೆ. ಅನವಶ್ಯಕವಾಗಿ ಪಡೆದ ಸಾಲಕ್ಕೆ ವಿನಾಕಾರಣ ಬಡ್ಡಿ ಸೇರ್ಪಡೆಯಾಗಿ ರೈತರಿಗೆ ಸಾಲ ಮರುಪಾವತಿ ಮಾಡುವಾಗ ಕಷ್ಟುವಾಗುತ್ತದೆ. ಆದ್ದರಿಂದ ಬ್ಯಾಂಕ್ ಮೊದಲು ರೈತರಿಗೆ ಸಾಲ ಪಡೆಯುವಾಗಿನ ಅವಧಿಯಲ್ಲಿ ಸೂಕ್ತ ತಿಳುವಳಿಕೆ ನೀಡುತ್ತದೆ ಹೊರೆತು ಅಧೈರ್ಯಗೆಡಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಬ್ಯಾಂಕ್ನ ವಿಭಾಗೀಯ ಅಧಿಕಾರಿ ವಾಮನ್ ಹೇಳಿದರು.
ಮಧ್ಯವರ್ತಿಗಳು ಬೇಡ: ಮಧ್ಯವರ್ತಿಗಳೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳದೇ ಬ್ಯಾಂಕ್ನ ಸೇವೆಯನ್ನು ಎಲ್ಲಾ ರೈತರು ಪಡೆಯಬೇಕು ಎಂದು ಸ್ಥಳೀಯ ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಹೇಳಿದರು.
ತುರುವೇಕೆರೆ ಎಸ್ಬಿಎಂನಿಂದ ಸುಮಾರು 55 ರೈತರಿಗೆ ವಿವಿಧ ಯೋಜನೆಯಡಿ ಸುಮಾರು 87 ಲಕ್ಷ ರು.ಗಳನ್ನು ಬಿಡುಗಡೆ ಮಾಡಿರುವುದಾಗಿ ವ್ಯವಸ್ಥಾಪಕ ರಾಜಶೇಖರ್ ಹೇಳಿದರು. ದಬ್ಬೇಘಟ್ಟ ಶಾಖಾ ಘಟಕದಿಂದ 40 ರೈತರಿಗೆ ಸುಮಾರು 107 ಲಕ್ಷ ರು.ಗಳ ಸಾಲ ಯೋಜನೆ ನೀಡಲಾಗಿದೆ ಎಂದು ಶಾಖಾ ವ್ಯವಸ್ಥಾಪಕ ವಿನೋದ್ ಕುಮಾರ್ ಹೇಳಿದರು. ಅಮ್ಮಸಂದ್ರದ ಶಾಖಾ ಘಟಕದಿಂದ 56 ಫಲಾನುಭವಿಗಳಿಗೆ 56 ಲಕ್ಷ ರೂಗಳನ್ನು ಬಿಡುಗಡೆ ಮಾಡಿರುವುದಾಗಿ ವ್ವವಸ್ಥಾಪಕಿ ವಿಜಯಲಕ್ಷ್ಮಿ ಹೇಳಿದರು.
ಸನ್ಮಾನ: ಸಮಾರಂಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಅರಳೀಕೆರೆ ತಿಮ್ಮಣ್ಣನವರನ್ನು ರೈತ ಪ್ರತಿನಿಧಿಯಾಗಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ವೇಳೆ ಎಜಿಎಂ ಶಂಕರ್ ರಾವ್ ಅವರೇ ಖುದ್ದಾಗಿ ಸಭಿಕರ ಬಳಿ ತೆರಳಿ ಸುಮಾರು 90 ವರ್ಷಕ್ಕೂ ಮೇಲ್ಪಟ್ಟ ವಯೋವೃದ್ಧ ರೈತರೋರ್ವರನ್ನು ವೇದಿಕೆ ಮೇಲೆ ಕರೆದುಕೊಂಡು ಬಂದು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದುದು ವಿಶೇಷವಾಗಿತ್ತು. ಬ್ಯಾಂಕ್ಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಹಲವಾರು ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ರೈತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ನ ಡಾ.ಎ.ನಾಗರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜಣ್ಣ, ಮಾಜಿ ಅಧ್ಯಕ್ಷ ಪ್ರಹ್ಲಾದ್, ಕಸಾಪ ಅಧ್ಯಕ್ಷ ದೇವರಾಜು, ಎಸ್ಬಿಎಂನ ಅಧಿಕಾರಿ ಕಿರಣ್ ಪೈ ಮೊದಲಾದವರು ಭಾಗವಹಿಸಿದ್ದರು. ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ಮೂಡಲಗಿರಯ್ಯ ವಂದಿಸಿದರು.