ಸಿದ್ದುಗೆ ಅಗ್ನಿಪರೀಕ್ಷೆಯಲ್ಲ, ಗೆಲವು ಅನಿವಾರ್ಯ
ಕ.ಪ್ರ.ವಾರ್ತೆ ತುಮಕೂರು ಆ.15
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಗ್ನಿಪರೀಕ್ಷೆಯಲ್ಲ. ಆದರೆ ಗೆಲವು ಅನಿವಾರ್ಯವಾಗಿದೆ ಎಂದು ಕಾನೂನು, ನ್ಯಾಯ, ಮಾನವಹಕ್ಕು ಹಾಗೂ ಸಂಸದೀಯ ವ್ಯವಹಾರ, ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ವಿಶ್ಲೇಷಿಸಿದರು.
ಅವರು ತುಮಕೂರಿನಲ್ಲಿ 67 ನೇ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಲೋಕಸಭಾ ಉಪಚುನಾವಣಾ ಅವಧಿ ತೀರ ಅಲ್ಪಾವಧಿಯದ್ದು. ಆದರೆ ಅನಿವಾರ್ಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿವಸ ಕೂಡ ಕಳೆದಿಲ್ಲ. ಚುನಾವಣೆ ಬಂದಿದೆ. ಏನೂ ಮಾಡಲಿಕ್ಕಾಗಲ್ಲ. ಹೈಕಮಾಂಡ್ ಆದೇಶ ಕೂಡ ಬಂದಿದೆ. ಗೆಲವು ಅನಿವಾರ್ಯವಾಗಿದೆ. ಆದರೆ ಈ ಅಲ್ಪಾವಧಿ ಲೋಕಸಭಾ ಅವಧಿಯ ಉಪಚುನಾವಣೆಯಿಂದ ಯಾರಿಗೂ ಲಾಭವಿಲ್ಲ ಎಂದು ಜಯಚಂದ್ರ ಪ್ರತಿಪಾದಿಸಿದರು.
ರಾಜಕೀಯ ಪಕ್ಷಗಳ ಅಪವಿತ್ರ ಮೈತ್ರಿ, ಅನೀತಿಯಿಂದಾಗಿ ಜನತೆಗೆ ಅಸಹ್ಯ ಹುಟ್ಟಿದೆ. ಜನತೆಯ ವಿಶ್ವಾಸ ಕಳೆದುಕೊಂಡಿದೆ. ಜೆಡಿಎಸ್ ಹಾಗೂ ಬಿಜೆಪಿಯ ಅಸಹ್ಯ, ಅಪವಿತ್ರ ಮೈತ್ರಿ ಅತ್ಯಂತ ಅಸಹ್ಯ ತರುವಂತಹದ್ದಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ರಾಜಕೀಯ ಪಕ್ಷಗಳ ನಂಬಿಕೆ, ವಿಶ್ವಾಸಾರ್ಹತೆಗೆ ದಕ್ಕೆ ಬಂದಿದೆ. ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸ್ವಇಚ್ಛೆಯಿಂದ ಓಟು ಹಾಕಲಿದ್ದಾರೆ. ಅಪವಿತ್ರ ಮೈತ್ರಿಯಿಂದಾಗಿ ಓಟುಗಳು ಒಗ್ಗೂಡುವುದರ ಬದಲು ಒಡೆಯಲಿವೆ. ಹೀಗಾಗಿ ಕಾಂಗ್ರೆಸ್ ಗೆಲವು ಸುಲಭವಾಗಲಿದೆ ಎಂದು ಜಯಚಂದ್ರ ವ್ಯಾಖ್ಯಾನಿಸಿದರು.
ಬಿಜೆಪಿ ನಾಶವಾಗಿದೆ: ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಲೋಕಸಭಾ ಉಪಚುನಾವಣಾ ಕಣದಿಂದ ಹಿಂದೆ ಸರಿಯುವುದರ ಮೂಲಕ ತನ್ನ ಅಸ್ತಿತ್ವ ಇಲ್ಲ, ಸಾರ್ವಜನಿಕ ಜವಾಬ್ದಾರಿ ಇಲ್ಲ ಎಂದು ಸಾಬೀತುಪಡಿಸಿದೆ. ಒಂದು ರೀತಿ ಬಿಜೆಪಿ ನಾಶವಾಗಿದೆಯೆಂದೇ ಅರ್ಥ. ಇನ್ನು ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸಲು ತನಗೆ ಅರ್ಹತೆಯಿಲ್ಲ ಎಂಬುದನ್ನು ಬಿಜೆಪಿ ಈ ಮೂಲಕ ತಿಳಿಸಿದೆ ಎಂದು ಜಯಚಂದ್ರ ವಿಶ್ಲೇಷಿಸಿದರು. ಆದರೆ ಎಲ್ಲ ರಾಜಕೀಯ ಪಕ್ಷಗಳಿಗೂ ಸಾರ್ವಜನಿಕ ಜವಾಬ್ದಾರಿಯಿದೆ ಎಂಬುದನ್ನು ಮರೆಯಲಾಗದು ಎಂದರು.
ಜೆಡಿಎಸ್ ಕಂಪನಿ ಕಾಯ್ದೆಯಡಿ ಕಾರ್ಯ: ಜೆಡಿಎಸ್ ತೋರಿಕೆಯ ಜಾತ್ಯತೀತ ಪಕ್ಷ. ಜಾತ್ಯತೀತತೆ ಅಂದರೆ ಏನು ಎಂಬುದನ್ನು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ವ್ಯಾಖ್ಯಾನಿಸಿದ್ದಾರೆ. ಈಗ ಅದರ ಚರ್ಚೆ ಬೇಡ. ಜೆಡಿಎಸ್ ಅಕ್ಷರಶಃ ಕಂಪನಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ಪಕ್ಷವಾಗಿದೆ. ಕಂಪನಿಗೆ ಸ್ವಾರ್ಥಮೊಂದೇ ಮುಖ್ಯ ಎಂಬುದನ್ನು ಬೇರೆ ಹೇಳಬೇಕಿಲ್ಲ. ಲಾಭಕ್ಕಾಗಿ ಜೆಡಿಎಸ್ ತತ್ವ -ಸಿದ್ಧಾಂತಗಳನ್ನು ಬಲಿಕೊಟ್ಟಿದೆ ಎಂದು ಜಯಚಂದ್ರ ಲೇವಡಿ ಮಾಡಿದರು.
ಸಚಿವ ಜಯಚಂದ್ರ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಉಪಸ್ಥಿತರಿದ್ದುದು ಗಮನಾರ್ಹ. ಈ ಸಂದರ್ಭದಲ್ಲಿ ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ಇದ್ದರು.