ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

31 ರಂದು ಶಿರಾ ಬಂದ್ಗೆ ಕರೆ

Rashmi Kasaragodu
Updated On : 17 Aug 2013, 12:57 pm

ಕ.ಪ್ರ.ವಾರ್ತೆ    ಶಿರಾ    ಆ. 16
ನಗರದಲ್ಲಿ ಜಾಮೀಯಾ ಮಸೀದಿ ವಕ್ಫ್ ಮಂಡಳಿಯ ವತಿಯಿಂದ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ 112 ಅಂಗಡಿ ಮಳಿಗೆಗಳ ಸಂಬಂಧವಾಗಿ ವಿಚಾರಣೆ ನ್ಯಾಯಾಲಯದಲ್ಲಿದ್ದರೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳು ಮಾಡಿದ ಆದೇಶ ಕಾನೂನು ಬಾಹಿರವಾಗಿದೆ. ಸದರಿ ಅಂಗಡಿ ಮಳಿಗೆಗಳನ್ನು ಯಾವುದೇ ಕಾರಣಕ್ಕೂ ಸಕ್ರಮಗೊಳಿಸಬಾರದೆಂದು ಆ. 31 ರಂದು ಶಿರಾ ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ, ಹಿಂದೂ ಸ್ವಾಭಿಮಾನಿ ಸಮಾವೇಶ್ ಹಾಗೂ ಶಿರಾ ಬಂದ್ಗೆ ಕರೆ ನೀಡಲಾಗಿದೆ.
 ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಅಜೇಕರ್ ಈ ವಿಷಯವನ್ನು ಇಲ್ಲಿ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಅಕ್ರಮವಾಗಿ ಕಲ್ಲುಕೋಟೆ ಸರ್ವೆ ನಂ. 49 ರ ಸ್ಮಶಾನದ ಜಾಗದಲ್ಲಿ ನಿರ್ಮಾಣ ಮಾಡಲಾದ ಅಂಗಡಿ ಮಳಿಗೆಗಳನ್ನು ಸಕ್ರಮಗೊಳಿಸುವ ಸಂಬಂಧ ವಿಷಯ ನ್ಯಾಯಾಲಯದಲ್ಲಿದ್ದರೂ ಅದನ್ನು ಉಲ್ಲಂಘಿಸಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ಅವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳು ಸಕ್ರಮಗೊಳಿಸುವ ಅದೇಶ ನೀಡಿದ್ದು ಇದನ್ನು ಖಂಡಿಸುತ್ತೇವೆ ಎಂದರು.
ಶಿರಾದಲ್ಲಿ ಸಮಾವೇಶ ನಡೆಸಲು ಸಂಘಟನಾತ್ಮಕ ಚಟುವಟಿಕೆ ಕೈಗೊಳ್ಳುತ್ತಿರುವ 10 ಮಂದಿ ಕಾರ್ಯಕರ್ತರ ಮೇಲೆ ಆರಕ್ಷಕರ ಮನವಿಯ ಮೇರಿಗೆ ತಾಲೂಕು ದಂಡಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ರಾಘವೇಂದ್ರ ಅಜೇಕರ್ ತೀವ್ರವಾಗಿ ಖಂಡಿಸಿದರು.
ಅಮಾಯಕರ ಮೇಲೆ ಪ್ರಕರಣ: ಅಮಾಯಕರ ಮೇಲೂ ಕೂಡ ಪ್ರಕರಣವನ್ನು ದಾಖಲಿಸಲಾಗಿದೆ. ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಸಮಾವೇಶ ಮಾಡದಂತೆ ಹೆದರಿಸುವ ಪ್ರಯತ್ನವನ್ನು ಶಿರಾ ನಗರ ಪೊಲೀಸರು ಮಾಡುತ್ತಿದ್ದಾರೆ. ವಿನಾಕಾರಣ ನಮ್ಮ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿರುವ ಜಾಮಿಯಾ ಮಸಿದಿಯ ವಕ್ಫ್ ಮಂಡಳಿಯವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಹಿಂದೂ ಸ್ವಾಭಿಮಾನಿ ಸಮಾವೇಶವನ್ನು ಕೈಬಿಡುವುದಿಲ್ಲ ಎಂದರು.
ಆಗಸ್ಟ್ 31 ರಂದು ನಡೆಯುವ ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ  ನಿರೀಕ್ಷೆಯಿದ್ದು ಸಾರ್ವಜನಿಕರು, ವರ್ತಕರು, ಈ ಸಮಾವೇಶದಲ್ಲಿ ಪಾಲ್ಗೊಂಡು ಒಂದು ದಿನದ ಮಟ್ಟಿಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ, ವಿಶ್ವಾರಾಧ್ಯ, ತುಳಸಿರಾಂ, ಸಂತೋಷ್ ಮತ್ತಿತರರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement