ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಲೆಮಾರಿ ಸಮುದಾಯ ಅಧ್ಯಯನಕ್ಕೆ ಆಯೋಗ

Rashmi Kasaragodu
Updated On : 17 Aug 2013, 12:58 pm

ಕ.ಪ್ರ.ವಾರ್ತೆ    ತುಮಕೂರು    ಜು. 16
ಅಲೆಮಾರಿ ಸಮುದಾಯಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಪ್ರತ್ಯೇಕ ಆಯೋಗ ರಚಿಸುವಂತೆ ಸಾಹಿತಿ ಕುಪ್ಪೆ ನಾಗರಾಜ್ ಆಗ್ರಹಿಸಿದ್ದಾರೆ.
ಅವರು ಶಿರಾದ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಮತ್ತು ಜಿಲ್ಲಾ ಅಲೆಮಾರಿ ದೊಂಬಿದಾಸ ಸಂಘದ ವತಿಯಿಂದ ಶಿರಾದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರದಲ್ಲಿ ಸಮುದಾಯದ ಸಾಂಸ್ಕೃತಿಕ ಇತಿಹಾಸ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ಶಕ್ತಿಯು ದೇಶವನ್ನು ಎಲ್ಲ ರೀತಿಯ ವಿಪತ್ತುಗಳಿಂದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ದೇಶಪ್ರೇಮಿಗಳು ಅದನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಿದೆ. ನಿದರ್ಶನಕ್ಕೆ ದೊಂಬಿದಾಸ ಸಮುದಾಯವು ಸಾಮೂಹಿಕ ಮಾಧ್ಯಮಗಳಿರದಿದ್ದ ಕಾಲದಿಂದಲೂ ನಾಟಕ, ಸಂಗೀತ, ವಾದ್ಯಗಳ ಮೂಲಕ ಸಂದೇಶಗಳನ್ನು ಮುಟ್ಟಿಸುತ್ತಾ ಸಾಮಾಜಿಕ ಸಮತೋಲನಕ್ಕೆ ನೆರವಾಗಿದೆ ಎಂದರು.
ಇನ್ನೊಂದೆಡೆ ಕಲಾ ಗುರುವಾದ ಈ ಸಮುದಾಯದ ಅಸಂಗ್ರಹ ಗುಣವು ಸಾಮಾಜಿಕ ಸ್ವಾಸ್ಥ್ಯ ಮತ್ತು ನೈತಿಕ ಪ್ರಜ್ಞೆಯನ್ನು ಪೊರೆಯುತ್ತಾ ಬಂದಿದೆ. ಇಂತಹ ಸಾವಿರಾರು ಸಮುದಾಯಗಳು ದೇಶದಾದ್ಯಂತ ಚದುರಿ ಹೋಗಿದ್ದು ಅವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಿಂದುಳಿದ ವರ್ಗಗಳ ಆಯೋಗಗಳು ಸೋಲುತ್ತಿವೆ. ಕರ್ನಾಟಕದಲ್ಲೇ ಸುಮಾರು 50 ಅಲೆಮಾರಿ ಸಮುದಾಯಗಳಿವೆ. ಹಲವು ಸಂಸ್ಕೃತಿಗಳು ಮರುಗುಭಾಷೆ (ಗುಪ್ತಭಾಷೆ)ಯಲ್ಲಿವೆ. ಆದ್ದರಿಂದ ಇಂತಹ ಎಲ್ಲ ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ವಿಶಿಷ್ಟ ಅಧ್ಯಯನಕ್ಕಾಗಿ ಪ್ರತ್ಯೇಕ ಆಯೋಗವನ್ನು ರಚಿಸಬೇಕೆಂದು ಒತ್ತಾಯಿಸಿದರು.
ಅತಿ ಜರೂರು: ಭಾರತದ ಜಾತಿ ವ್ಯವಸ್ಥೆ ಕುರಿತ ಗೋಷ್ಠಿಯಲ್ಲಿ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರು ಅಲೆಮಾರಿ ಸಮುದಾಯಗಳ ಪ್ರತಿ ವ್ಯಕ್ತಿಯೂ ಶಿಕ್ಷಣವನ್ನು ಪಡೆದು ಆತ್ಮಸ್ಥೈರ್ಯ, ಸ್ವಾಭಿಮಾನಗಳನ್ನು ಕಾಪಾಡಿಕೊಳ್ಳುವುದು, ಬಹು ಸಂಸ್ಕೃತಿಯ ಹಿರಿಮೆಯನ್ನು ಅರಿತುಕೊಳ್ಳುವುದು ಅತಿ ಜರೂರಾಗಿದ್ದು, ಸರ್ಕಾರದಿಂದ ಮೂಲ ಸೌಲಭ್ಯಗಳನ್ನು ಪಡೆಯುವುದು ಮಾತ್ರ ನಮ್ಮ ಹೋರಾಟದ ಗುರಿ ಅಲ್ಲ. ಪ್ರಜಾಪ್ರಭುತ್ವದಲ್ಲಿನ ಎಲ್ಲ ಅವಕಾಶಗಳನ್ನು, ಮುಖ್ಯವಾಗಿ ರಾಜಕೀಯ ಅಧಿಕಾರವನ್ನು ಪಡೆಯುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ ಆಗಬೇಕು ಎಂದು ಅಲೆಮಾರಿ ಸಮುದಾಯಗಳಿಗೆ ಕರೆ ನೀಡಿದರು.
ಮಂಡನೆ: ಎರಡು ದಿನಗಳ ಈ ಶಿಬಿರದಲ್ಲಿ ಸಮುದಾಯದ ಸಾಂಸ್ಸಕೃತಿಕ ಕೊಡುಗೆ ಕುರಿತು ಸಾಹಿತಿ, ನಟ ಕಾಕೋಳು ರಾಮಯ್ಯ, ಅಲೆಮಾರಿ ಸಮುದಾಯಗಳ ವಿಸ್ತೃತ ಸಂಘಟನೆ ಕುರಿತು ಚಿಂತಕ ಕೆ.ದೊರೈರಾಜು, ಆರೋಗ್ಯ ಮತ್ತು ನೈರ್ಮಲ್ಯ-ನಾಯಕತ್ವದ ಜವಾಬ್ದಾರಿಗಳು ಕುರಿತು ಡಾ.ಹೆಚ್.ವಿ. ರಂಗಸ್ವಾಮಿ ಅವರು ವಿಚಾರಗಳನ್ನು ಮಂಡಿಸಿದರು. ಚಿಂತಕರಾದ ಬಿ.ಜಿ. ಗಂಗಾಧರಯ್ಯ, ರಂಗನಾಥ್, ಡಾ.ಬಸವರಾಜ್ ವಿವಿಧ ಗೋಷ್ಟಿಗಳ ಅಧ್ಯಕ್ಷತೆ ವಹಿಸಿದ್ದರು.
ಅಲೆಮಾರಿ ದೊಂಬಿದಾಸ ಸಂಘಟನೆಯ ಮುಖಂಡರಾದ ರವಿಕುಮಾರ್, ಜಯಲಕ್ಷ್ಮೀ ಮಾರಣ್ಣ, ಅನಂತಪದ್ಮನಾಭಯ್ಯ, ರಂಗನಾಥ್, ಗಂಗಾಧರಯ್ಯ, ತಿಪ್ಪೆಸ್ವಾಮಿ, ಕೃಷ್ಣದಾಸ್, ಸಿದ್ಧರಾಜು, ಕಣಷ್ಣಪ್ಪ ಸೇರಿದಂತೆ 60 ಪದಾಧಿಕಾರಿಗಳು ಹಾಗೂ ಸಮಾನ ಮನಸ್ಕ ಗೆಳೆಯರು ನಡೆಸಿದ ವಿಚಾರ ಮಂಥನದಲ್ಲಿ 4 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ದೊಂಬಿದಾಸ ಸಮುದಾಯದ ಎಲ್ಲರಿಗೂ ಶಿಕ್ಷಣ ದೊರಕಿಸುವುದು. ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು. ಹೆಣ್ಣಾಗಲಿ ಗಂಡಾಗಲಿ ಗರಿಷ್ಠ ಮಟ್ಟದವರೆಗೆ ವಿದ್ಯಾಭ್ಯಾಸ ಪಡೆಯುವಂತೆ ಪ್ರೇರೇಪಿಸುವುದು.
ವ್ಯಾಪಾರ, ಕಲೆ, ಕುಟುಂಬ ನಿರ್ವಹಣೆ ಮುಂತಾದ ಕೌಶಲ್ಯಗಳಲ್ಲಿ ಪರಿಣಿತರಾಗಿದ್ದೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನಿರ್ಲಕ್ಷಿಸಲ್ಪಟ್ಟಿರುವ ಸಮುದಾಯದ ಮಹಿಳೆಯರಿಗೆ ಶಿಕ್ಷಣ, ಸಂಘಟನೆ ಮುಂತಾದ ಅವಕಾಶಗಳಲ್ಲಿ ಪ್ರಾಧಾನ್ಯತೆ ನೀಡಿ ಸಮುದಾಯದ ಅಭಿವೃದ್ಧಿಯನ್ನು ಸಾಧಿಸುವುದು.
ಸಮಸ್ಯೆಗಳಿಗೆ ಸ್ಪಂದಿಸುವುದು: ಇತರೆ ಅಲೆಮಾರಿ ಸಮುದಾಯಗಳು, ಶೋಷಿತ ಜಾತಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವುದು. ಸಮಾನ ಮನಸ್ಕ ಸಂಘಟನೆಗಳೊಂದಿಗೆ ಚರ್ಚೆ-ಸಂವಾದಗಳನ್ನು ನಡೆಸಿ ಹೋರಾಟವನ್ನು ಬಲಗೊಳಿಸುವುದು. ದೊಂಬಿದಾಸ-ಚನ್ನದಾಸ-ದಾಸರಿ ಮುಂತಾದ ಸಮಾನ ಗುಂಪುಗಳಿಗೆ ಸಮಾನ ಮೀಸಲಾತಿಯನ್ನು ದೊರಕಿಸಲು ಒತ್ತಾಯಿಸುವುದು.
ನಿರ್ಲಕ್ಷಿತ ಸಮುದಾಯಗಳನ್ನು ಸಮರ್ಥವಾಗಿ ಸಂಘಟಿಸಬಲ್ಲ, ಅವರ ಹಕ್ಕುಗಳಿಗಾಗಿ ಪ್ರಬಲ ಹೋರಾಟವನ್ನು ರೂಪಿಸಬಲ್ಲ ಸಮತೂಕದ ಸದಾ ಎಚ್ಚರದ ನಾಯಕತ್ವವನ್ನು ಹುಟ್ಟುಹಾಕಲು  ಚಿಂತನಶೀಲ ಅಧ್ಯಯನ ಶಿಬಿರಗಳು, ಕಾರ್ಯಾಗಾರಗಳನ್ನು ಆಯೋಜಿಸುವುದು.  ಚಿಂತನೆ-ಕಾರ್ಯಕ್ರಮ-ಹೋರಾಟಗಳ ಮೂಲಕ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು. ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪುವ ಉದ್ದೇಶಕ್ಕಾಗಿ ಮಹಿಳೆಯರ, ವಿದ್ಯಾರ್ಥಿಗಳ ಸಂಘಟನೆಗಳನ್ನು ಬಲಪಡಿಸುವುದು. ಬಹುಸಂಸ್ಕೃತಿಯ ಕಲಾಮೇಳಗಳನ್ನು ಸಂಘಟಿಸುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement