ದುಷ್ಟ ಶಕ್ತಿಗಳಿಂದ ದೇಶದಲ್ಲಿ ವಿದ್ವಂಸಕ ಕೃತ್ಯ
ಕ.ಪ್ರ.ವಾರ್ತೆ ಮಧುಗಿರಿ ಆ. 16
ಇಂದು ಭಾರತ ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ಆದರೆ ಕೆಲವು ದುಷ್ಟ ಶಕ್ತಿಗಳು ದೇಶದಲ್ಲಿ ವಿದ್ವಂಸಕ ಕೃತ್ಯವೆಸಗಿ ಆತಂಕ ಸ್ಥಿತಿ ಉಂಟು ಮಾಡುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಹೊ.ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಟ್ಟಣದ ಡೂಂ ಲೈಟ್ ಸರ್ಕಲ್ನಲ್ಲಿ ಭಾರತ ಸಂಕಲ್ಪ ದಿನದ ಅಂಗವಾಗಿ ಏರ್ಪಡಿಸಿದ್ದ ದೇಶ ಭಕ್ತಿಗೀತೆಗಳ ಗಾಯನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದುಷ್ಟ ಶಕ್ತಿಗಳ ಕೃತ್ಯವನ್ನು ಹತ್ತಿಕ್ಕಲು ಪ್ರತಿಯೊಬ್ಬರು ಪಣ ತೊಡಬೇಕಿದೆ ಎಂದು ಕರೆ ನೀಡಿದ ಅವರು,.ದೇಶ ರಕ್ಷಣೆಯಲ್ಲಿ ತೊಡಗಿರುವ ಸಂಘಟನೆಗಳನ್ನು ಮಟ್ಟ ಹಾಕಲು ಕೆಲ ಶಕ್ತಿಗಳು ಸಂಕಲ್ಪ ಮಾಡಿವೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಗಡಿ ಭಾಗದಲ್ಲಿ ಉದ್ವಿಗ್ನತೆ ಉಂಟು ಮಾಡುತ್ತಿರುವ ಪಾಕಿಸ್ತಾನದ ದಮನಕಾರಿ ನೀತಿಯನ್ನು ಮತ್ತು ಕಳೆದ ವಾರ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಐದು ಮಂದಿ ಭಾರತೀಯ ಯೋಧರ ಬಲಿದಾನಕ್ಕೆ ಕಾರಣವಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದರೂ ಪಾಕ್ ಸೇನೆ ತನ್ನ ಕೃತ್ಯವನ್ನು ಮುಂದುವರಿಸಿದೆ ಎಂದು ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಭಾರತ ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಾ ಬಂದಿದೆ. ಭಾರತದ ಅಭಿವೃದ್ಧಿಗೆ ಮುಖ್ಯ ತೊಡಕಾಗಿರುವ ಬಡತನ ನಿವಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಲಲಿತಾಂಭ ಲಕ್ಷ್ಮೀನರಸಯ್ಯ, ಮುಜೂಂದಾರ್ ಅನೇಕರು ದೇಶದ ಭಕ್ತಿಗೀಡೆ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ,ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಸಿಪಿಐ ಎ.ಎಸ್.ವಿಶ್ವಾಸ್, ನೌಕರರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್ ಮತ್ತಿತರರು ಇದ್ದರು.ಚಿ.ಸೂ.ಕೃಷ್ಣಮೂರ್ತಿ ಸ್ವಾಗತಿಸಿ ಅಮರಾವತಿ ದ್ರೇಹಾಚಾರ್ ನಿರೂಪಿಸಿ ವಂದಿಸಿದರು.