ಗುಟ್ಕಾ ನಿಷೇಧದಿಂದ ಅಡಕೆ ಖರೀದಿ ಇಳಿದಿಲ್ಲ
ಕ.ಪ್ರ.ವಾರ್ತೆ ತುಮಕೂರು ಆ. 17
ಗುಟ್ಕಾ ನಿಷೇಧದಿಂದ ಅಡಕೆ ಖರೀದಿ ಇಳಿಮುಖವಾಗಿಲ್ಲ. ಪ್ರತಿ ಕೆಜಿಗೆ 110 ಬೆಂಬಲ ಬೆಲೆ ಮೂಲಕ ಖರೀದಿ ಮಾಡಲಾಗುತ್ತಿದೆ ಎಂದು ಮಂಗಳೂರಿನ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಹೇಳಿದರು.
ನಗರದ ಬಟವಾಡೆಯ ಎಪಿಎಂಸಿ ಸಭಾಂಗಣದಲ್ಲಿ ಮಂಗಳೂರಿನ ಕ್ಯಾಂಪ್ಕೋ ವತಿಯಿಂದ ಏರ್ಪಡಿಸಿದ್ದ ತುಮಕೂರು ಜಿಲ್ಲೆಯ ಅಡಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕ್ಯಾಂಪ್ಕೋ ವತಿಯಿಂದ ರಬ್ಬರ್, ಅಡಕೆ ವ್ಯವಹಾರ ನಡೆಸಲಾಗುತ್ತಿದೆ. ವಾರ್ಷಿಕ 745 ಕೋಟಿ ವಹಿವಾಟು ನಡೆಯುತ್ತಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಕೋಕೋ, ಅಡಕೆ, ರಬ್ಬರ್ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ ಎಂದರು. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಗುಟ್ಕಾ ನಿಷೇಧಿಸಿರುವುದರಿಂದ ಅಡಕೆ ಬೆಲೆಗೆ ಬಾಧಕವಿಲ್ಲ. ಆದರೆ ಅಡಕೆ ಬೆಳೆಗಾರರು ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಅಡಕೆ ಬೆಳೆಗಾರರ ಸಮಾವೇಶಗಳನ್ನು ಕ್ಯಾಂಪ್ಕೋ ವತಿಯಿಂದ ನಡೆಸಿ, ಬಗೆಹರಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಹಲವಾರು ಸಲ ಮನವಿ ಮಾಡಿದ್ದರಿಂದ ಒಂದು ಕೆಜಿ ಅಡಕೆಗೆ ಇದ್ದ 75 ಈಗ 110 ಗೆ ಏರಿಕೆಯಾಗಿದೆ ಎಂದರು.
ಆಮದು ಸುಂಕದ ಪ್ರಮಾಣ ಕಡಿಮೆಯಾದ್ದರಿಂದ ಅಡಕೆ ವಹಿವಾಟಿನಲ್ಲಿ ಸಾಕಷ್ಟು ಏರುಪೇರಾಗಿದೆ. ನೆರೆಯ ದೇಶಗಳ ಮೂಲಕ ಬೇರೆ, ಬೇರೆ ದೇಶಗಳು ಭಾರತ ದೇಶದೊಳಗೆ ಸುಂಕರಹಿತ ಅಡಕೆಯನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಇಂಡೊನೇಷಿಯಾದಿಂದ ನೇರವಾಗಿ ಭಾರತಕ್ಕೆ ರಫ್ತು ಮಾಡಿಕೊಂಡರೆ ಸುಂಕ ತೆರಬೇಕು. ಆದರೆ ಭಾರತ ಮತ್ತು ಬಾಂಗ್ಲಾದೇಶದ ದ್ವಿಪಕ್ಷೀಯ ನೀತಿ ಬಳಸಿಕೊಂಡು, ಇಂಡೊನೇಷಿಯಾ ಬಾಂಗ್ಲಾದೇಶದ ಮೂಲಕ ಸುಂಕರಹಿತವಾಗಿ ಭಾರತಕ್ಕೆ ಅಡಕೆಯನ್ನು ರಫ್ತು ಮಾಡುತ್ತಿದೆ. ಹೀಗಾಗಿ ಇಂತಹ ಸುಂಕ ನೀತಿಗಳಲ್ಲಿ ಬದಲಾವಣೆ ತರಬೇಕು ಎಂದು ಕೇಂದ್ರ ಸರ್ಕಾರದ ಮೂಲಕ ಒತ್ತಡ ಹೇರಲಾಗಿದೆ ಎಂದರು.
ಚಾಳಿ ಅಡಕೆಗೆ ಗುಜರಾತ್ ರಾಜ್ಯದಲ್ಲಿ ಹೆಚ್ಚು ಬೇಡಿಕೆ ಇದೆ. ಅಲ್ಲಿ ಕರ್ನಾಟಕಕ್ಕಿಂತಲೂ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಅಡಕೆ ಬಳಸುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವ್ಯವಹಾರ ನಡೆಸಿ, ಅಡಕೆಯನ್ನು ಹೆಚ್ಚು ಗುಜರಾತ್ಗೆ ಮಾರಾಟ ಮಾಡುತ್ತಿದೆ. ಕ್ಯಾಂಪ್ಕೋ ಯಾವುದೇ ಮಧ್ಯವರ್ತಿಗಳ ಮೂಲಕ ಖರೀದಿಸುವುದಿಲ್ಲ. ನೇರವಾಗಿ ಬೆಳೆಗಾರರಿಂದಲೇ ಅಡಕೆ ಖರೀದಿಸಿ, ಪ್ರತಿ ಕೆಜಿಗೆ 110 ನೀಡಲಾಗುತ್ತಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಕುಕ್ಕೋಡಿಪದ್ಮನಾಭ ಅಧ್ಯಕ್ಷತೆ ವಹಿಸಿ, ಅಡಕೆ ಬೆಳೆಗಾರರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ, ಉತ್ತಮ ಬೆಲೆ ನೀಡಿ ಅಡಕೆಯನ್ನು ಕ್ಯಾಂಪ್ಕೋ ಖರೀದಿಸುತ್ತದೆ ಎಂದರು. ಕ್ಯಾಂಪ್ಕೋ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೋದ್ಕುಮಾರ್, ನಿರ್ದೆಶಕರಾದ ಸೀತಾರಾಮಭಟ್ಟ, ಮಹಾಬಲಭಟ್ಟ, ಕರುಣಾಕರ್ ನಂಬಿಯಾರ್, ಮುಖ್ಯ ವ್ಯವಸ್ಥಾಪಕ ವೆಂಕಟಕೃಷ್ಣಶರ್ಮಾ, ಮಹಮದ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.