ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಗ್ರಾಮೀಣಾಭಿವೃದ್ಧಿಗೆ ಗಮನ ಹರಿಸಿ'

Rashmi Kasaragodu
Updated On : 18 Aug 2013, 1:06 am

ತುಮಕೂರು: ಗ್ರಾಮಗಳು ರಾಷ್ಟ್ರದ ಬೆನ್ನೆಲುಬು. ಗ್ರಾಮೀಣಾಭಿವೃದ್ಧಿಯತ್ತ ಸಾರ್ವಜನಿಕರು ಗಮನಹರಿಸಬೇಕು ಎಂದು ನಗರಸಭಾ ಸದಸ್ಯ ಪ್ರೆಸ್ ರಾಜಣ್ಣ ಹೇಳಿದರು.
ನಗರದ ಭೀಮಸಂದ್ರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನಾಗರಿಕ ಪ್ರಜ್ಞೆ ಅರಿವು ಹಾಗೂ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ನೈರ್ಮಲ್ಯಕ್ಕಾಗಿ ಸರ್ಕಾರದ ನೆರವು ಬಯಸಿ ಕೂರುವುದು ತರವಲ್ಲ. ನಮ್ಮ ಗ್ರಾಮದ ನಿರ್ಮಲತೆಗೆ ಗ್ರಾಮೀಣರೇ ಪ್ರಾಂಜಲ ಚಿತ್ತದಿಂದ ನೆರವಾಗಬೇಕು. ನಮ್ಮ ಬದುಕಿನ ಏಳಿಗೆಗೆ ನಾವೇ ಶಿಲ್ಪಿಗಳಾಗಬೇಕೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಜೆಡಿಯು ಅಧ್ಯಕ್ಷ ಕೆಜಿಎಎಲ್ ರವಿ ಅವರು, ವಿದ್ಯಾರ್ಥಿಗಳಲ್ಲಿ ದೇಶ ಪ್ರಜ್ಞೆ ಮೂಡಿಸುವುದು ಅಗತ್ಯವಾಗಿದೆ ಎಂದರು.
ಮುಖ್ಯ ಭಾಷಣಕಾರರಾಗಿದ್ದ ವಿದ್ಯಾವಾಚಸ್ಪತಿ ಕವಿತಾಕೃಷ್ಣ ರಾಷ್ಟ್ರದ ಅಭ್ಯುದಯಕ್ಕಾಗಿ ಎಲ್ಲಾ ನಾಗರಿಕರು ಕಾಯ- ವಾಚಾ, ಮನಸಾ ಪರಿಶುದ್ಧವಾಗಿ ದುಡಿಯಬೇಕಾದುದು ಅನಿವಾರ್ಯ ಎಂದರು.
ನೋಟಿಗಾಗಿ ವೋಟು ಮಾರುವ ಹೀನ ಚಾಳಿಯಿಂದ ಮುಕ್ತರಾಗಬೇಕಾಗಿದೆ. ಗಾಂಧೀಜಿ ಕಂಡ ಕನಸನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅರ್ಥಪೂರ್ಣವಾಗಿ ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ನಮ್ಮ ರಾಷ್ಟ್ರದ ಎಲ್ಲಾ ಧರ್ಮಾಧಿಕಾರಿಗಳು ಸಹ ಇಂತಹ ಕ್ರಾಂತಿಕಾರಕ ಸೇವಾ ಕಾರ್ಯ ಮಾಡಿದರೆ ಖಂಡಿತ ಭಾರತ ರಾಮರಾಜ್ಯವಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಲ್ಪನ, ಗ್ರಾಮ ಯೋಜನೆಯ ಸ್ಥಳಿಯರಾದ ಮಂಗಳಮ್ಮ, ಕಲ್ಪನಾ, ಗೋವಿಂದಪ್ಪ, ಶಾಲಾ ಮುಖ್ಯೋಪಾಧ್ಯಾಯಿನಿ ಉಪಸ್ಥಿತರಿದ್ದರು. ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮ ಯೋಜನಾಧಿಕಾರಿ ಗಂಗಾಧರ ರೈ ಅವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement