ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ನೀತಿ ರೂಪಿಸಲು ಆಗ್ರಹ
ಕ.ಪ್ರ.ವಾರ್ತೆ ತುಮಕೂರು ಆ. 17
ಹಿರಿಯ ನಾಗರಿಕರಿಗೆ ಸವಲತ್ತು ನೀಡುವ ಬಗ್ಗೆ ರಾಷ್ಟ್ರೀಯ ನೀತಿ ರೂಪಿಸಿ ಅನುಷ್ಠಾನಕ್ಕೆ ತರಲು ಆಯವ್ಯಯದಲ್ಲಿ ಸಾಕಷ್ಟು ಹಣ ಮೀಸಲಿಡುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿರಿಯ ನಾಗರಿಕರ ವೇದಿಕೆಯಿಂದ ಜಿಲ್ಲಾ ನಿವೃತ್ತ ನೌಕರರ ಸಂಘ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ಶ್ರೇಯೋಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ವೃದ್ಧಾಪ್ಯ ವೇತನವನ್ನು ಪ್ರತಿ ತಿಂಗಳು 2 ಸಾವಿರ ಕ್ಕೆ ಏರಿಸುವುದು, ಕಾಯಿಲೆ ಇದ್ದರೂ ವಯಸ್ಸಿನ ಮಿತಿ ಇಲ್ಲದೆ ಆರೋಗ್ಯ ವಿಮಾ ಯೋಜನೆ ಅನುಷ್ಠಾನಕ್ಕೆ ತರುವುದು, ಇಪಿಎಸ್ 95 ಪಿಂಚಣಿದಾರರು ಮಾಸಿಕ 2 ಸಾವಿರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಯಸ್ಸಾದವರ ಒಳಿತನ್ನು ಕಾಪಾಡುವುದು, ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ, ರಕ್ಷಣೆ, ಆರೋಗ್ಯ ಪಾಲನೆ, ಆಶ್ರಯ ಮತ್ತು ಇವರಿಗೆ ಮೂಲ ಸೌಕರ್ಯಗಳ ಅವಶ್ಯಕತೆ ಪೂರೈಸಲು ಕಾರ್ಯಕ್ರಮ ರೂಪಿಸಬೇಕೆಂಬುದು ರಾಜ್ಯ ನೀತಿಯ ಉದ್ದೇಶವಾಗಿದ್ದರೂ ಹಿರಿಯ ನಾಗರಿಕರಿಗೆ ಇವೆಲ್ಲಾ ಸೌಕರ್ಯ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ಪ್ರತಿಭಟನಾಕಾರರು ತೋಡಿಕೊಂಡಿದ್ದಾರೆ. ಪ್ರತಿ ವರ್ಷವೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಕೆಲವೊಂದು ಇಲಾಖೆಗಳಲ್ಲಿ ಲಭ್ಯವಿರುವ ಸಲವತ್ತು ಸಿಗುತ್ತಿಲ್ಲ. ರಾಜ್ಯದ ಜನಸಂಖ್ಯೆ ಶೇ. 79 ರಷ್ಟು ಜನ 60 ವರ್ಷ ಮೀರಿದವರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವೊಂದು ಕಾಯ್ದೆ ರೂಪಿಸಿದ್ದರೂ ಅವುಗಳ ಪ್ರಯೋಜನ ಮಾತ್ರ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸವಲತ್ತುಗಳ ಮಾಹಿತಿಯೇ ಹಿರಿಯ ನಾಗರಿಕರಿಗೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಕೈಪಿಡಿ ಪ್ರಕಟಿಸಬೇಕೆಂದು ಮನವಿ ಮಾಡಿದ್ದಾರೆ.