ತೆಲಂಗಾಣ ವಿರೋಧಿಸಿ ಆಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ: ತಹಸೀಲ್ದಾರ್ಗೆ ಮನವಿಪತ್ರ
ಪಾವಗಡ: ಪ್ರತ್ಯೇಕ ತೆಲಂಗಾಣ ವಿರೋಧಿಸಿ ಆಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪಾವಗಡ ತಾಲೂಕಿನ ಸಮಗ್ರ ನೀರಾವರಿ ಹೋರಾಟ ವೇದಿಕೆ ಸೇರಿದಂತೆ ವಿವಿಧ ಪ್ರಗತಿ ಪರ ಸಂಘ ಸಂಸ್ಥೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ತಹಸೀಲ್ದಾರ್ಗೆ ಮನವಿ ಪತ್ರ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಶ್ರೇಯಸ್ ಸಂಸ್ಥೆ ಅಧ್ಯಕ್ಷ ಹಾಗೂ ತಾ. ಭದ್ರ ಮೇಲ್ದಂಡೆ ಹೋರಾಟ ಸಮಿತಿ ಕಾರ್ಯದರ್ಶಿ ಸೊಗಡು ವೆಂಕಟೇಶ್ ಮಾತನಾಡಿ, ಪಾವಗಡ ತಾಲೂಕು ಸಂಪೂರ್ಣವಾಗಿ ಆಂಧ್ರದ ಅನೇಕ ತಾಲೂಕುಗಳಿಂದ ಸುತ್ತುವರಿದಿದೆ. ಅಲ್ಲದೇ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವ್ಯಾಪಾರ ವಹಿವಾಟುಗಳು ಸೇರಿದಂತೆ ಎಲ್ಲಾ ರಂಗಗಳಲ್ಲಿ ಪರಸ್ಪರ ಸಂಬಂಧಗಳನ್ನು ಹೊಂದಿದ್ದೇವೆ. ಕಳೆದ 20 ದಿನಗಳಿಂದ ಪಾವಗಡ ತಾಲೂಕು ಸುತ್ತುವರಿದ ಆಂಧ್ರ ಪ್ರದೇಶದ ವಿವಿಧ ತಾಲೂಕುಗಳು ಪ್ರತ್ಯೇಕ ತೆಲಂಗಣ ವಿಭಜನೆ ವಿರೋಧಿಸಿ ಸಮೈಕ್ಯ ಆಂಧ್ರ ಪ್ರದೇಶದ ಹೆಸರಿನಲ್ಲಿ ಗಡಿಗಳಲ್ಲಿ ನಡೆಸುತ್ತಿರುವ ಉಗ್ರ ಪ್ರತಿಭಟನೆಗಳಿಗೆ ಪಾವಗಡ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಪೂರ್ಣ ಬೆಂಬಲ ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ವಿ. ನಾಗಭೂಷಣರೆಡ್ಡಿ ಮಾತನಾಡಿ ಅಖಂಡ ಆಂಧ್ರ ವಿಭಜನೆಗೆ ನಮ್ಮ ವಿರೋಧವಿದೆ. ಅಲ್ಲದೇ ಆಂಧ್ರ ವಿಭಜನೆಯಿಂದ ದೇಶದಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ ಎಂದರು. ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ನಡೆಸುತ್ತಿರುವ ಸಮೈಕ್ಯ ಆಂಧ್ರಪ್ರದೇಶ ಹೋರಾಟಕ್ಕೆ ಇಲ್ಲಿನ ಸಂಘ ಸಂಸ್ಥೆಗಳು ಪೂರ್ಣ ಬೆಂಬಲ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸಾಂಕೇತಿಕ ಪಾವಗಡ ಬಂದ್ ಆಚರಿಸುವುದಾಗಿ ಅವರು ತಿಳಿಸಿದರು.
ರಾಷ್ಟ್ರೀಯ ಕಿಸಾನ್ ಸಂಘ, ಭದ್ರ ಮೇಲ್ದಾಂಡೆ ಹೋರಾಟ ವೇದಿಕೆ, ಕನ್ನಡ ಸಾಹಿತ್ಯ ಪರೀಷತ್, ಕನ್ನಡ ಯುವಕ ಸಂಘ, ರೋಟರಿ ಸಂಸ್ಥೆ, ಶ್ರೀರಾಮಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜ್ವಾಲಾ ನಗರ ನಾಗರಿಕ ವೇದಿಕೆ, ಬಸ್ ಮಾಲೀಕರ ಸಂಘ, ಹಮಾಲಿ ಸಂಘ, ಲಾರಿ ಮಾಲೀಕರ ಸಂಘ, ಲಾರಿ ಟಾಕ್ಸಿ ಮಾಲೀಕರ ಸಂಘಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಪಾಷ ಅವರಿಗೆ ಮನವಿ ಸಲ್ಲಿಸಿದರು.
ತಾ.ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಮುಖಂಡರಾದ ಕೇಶವಚಂದ್ರದಾಸ್, ಗೋಪಾಲ್ಕೃಷ್ಣ, ಗಂಗಾಧರ್, ಮನು ಮಹೇಶ್, ಚನ್ನಸಾಗರ ಮಲ್ಲೇಶ್, ಸಾಕ್ಷರ್ ಭಾರತ್ ಶ್ರೀನಿವಾಸ್ ಮುಂತಾದವರಿದ್ದರು.