ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದಾಖಲೆ ಇಲ್ಲದೇ ಪಡಿತರ ಸಾಗಣೆ: ಪ್ರತಿಭಟನೆ

Vishwanath S
Updated On : 19 Aug 2013, 12:22 pm

ಕ.ಪ್ರ.ವಾರ್ತೆ ,  ಕುಣಿಗಲ್ ,  ಆ. 18
ಸಮರ್ಪಕ ದಾಖಲೆಗಳಿಲ್ಲದೆ ಅಪಾರ ಪ್ರಮಾಣದ ಪಡಿತರ ಧಾನ್ಯ ಸಾಗಿಸುತ್ತಿದ್ದ ವಾಹನವನ್ನು ತಡೆದ ಕರವೇ ಪದಾಧಿಕಾರಿಗಳು, ನಾಗರಿಕರು, ಆಹಾರಧಾನ್ಯ ಸಾಗಣೆ ನಿಟ್ಟಿನಲ್ಲಿ ಸಮರ್ಪಕ ಉತ್ತರ ನೀಡದೆ ಗೊಂದಲಮಯ ಉತ್ತರ ನೀಡಿದ ಆಹಾರ ಶಿರಸ್ತೇದಾರ್ ಹಾಗೂ ಗೋದಾಮು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಸಾಗಣೆ ಗೋಲ್‌ಮಾಲ್ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ  ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಘಟನೆ ಭಾನುವಾರ ನಡೆಯಿತು.
ಮಧ್ಯಾಹ್ನ, 12 ಟನ್‌ಗೂ ಅಧಿಕ ಭಾರದ ಪಡಿತರ ಧಾನ್ಯಗಳನ್ನು ತುಂಬಿಕೊಂಡ ಕ್ಯಾಂಟರ್ ವಾಹನ ತುಮಕೂರು ರಸ್ತೆಯ ವೇಬ್ರಿಡ್ಜ್‌ನಲ್ಲಿ ನಿಂತಿತ್ತು. ಅದನ್ನು ಕಂಡ, ನಾಗರಿಕರು, ಕರವೇ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳಿಗೆ ತಿಳಿಸಿ ಹಿನ್ನೆಲೆ ಕರವೇ ಪದಾಧಿಕಾರಿಗಳು ವಾಹನ ತಡೆದು, ಪಡಿತರ ಧಾನ್ಯ ಸಾಗಣೆ ದಾಖಲೆ ಕೇಳಿದರು. ಆಗ, ವಾಹನದಲ್ಲಿದ್ದವರು ಸದರಿ ದಾಖಲೆ ಮತ್ತೊಬ್ಬರ ಬಳಿ ಇದೆ ಎಂದು ನಿರ್ಲಕ್ಷ್ಯಉತ್ತರ ನೀಡಿದರು. ಇದರಿಂದ ಅನುಮಾನಗೊಂಡ ಪದಾಧಿಕಾರಿಗಳು, ಆಹಾರ ಶಿರಸ್ತೇದಾರ್ ಅವರನ್ನು ಸಂಪರ್ಕಿಸಿದಾಗ, ಬಿಲ್ ತಮ್ಮ ಬಳಿ ಇದ್ದು, ವಾಹನ ಬಿಟ್ಟು ಕಳುಹಿಸಿ. ಬಿಲ್ ಬೇಕಾದಲ್ಲಿ ಗೋದಾಮಿಗೆ ಬರುವಂತೆ ನಿರ್ಲಕ್ಷ್ಯ ಉತ್ತರ ನೀಡಿದರು.
ಇದರಿಂದ ಬೇಸತ್ತ ಪದಾಧಿಕಾರಿಗಳು ವಾಹನವನ್ನು ತಡೆದು, ತಹಸೀಲ್ದಾರ್, ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಧ್ಯೆ ಗೋದಾಮಿನ ವ್ಯವಸ್ಥಾಪಕ ಕೆಂಚಪ್ಪ, ತರಾತುರಿಯಲ್ಲಿ ವಾಹನದಲ್ಲಿದ್ದ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಬಿಲ್ ಸಮೇತ ಹಾಜರಾದರು. ಈ ಹಂತದಲ್ಲಿ ಸ್ಥಳೀಯ ನಾಗರಿಕರು ಸಹ ಜಮಾವಣೆಗೊಂಡರು.
ವ್ಯವಸ್ಥಾಪಕರು ಹಾಜರುಪಡಿಸಿದ ಬಿಲ್‌ನಲ್ಲಿ ಎಷ್ಟು ಆಹಾರ ಧಾನ್ಯ ಸಾಗಿಸಲಾಗುತ್ತಿದೆ. ವಾಹನ ಗೋದಾಮು ಬಿಟ್ಟ ವೇಳೆ ಯಾವುದು ನಮೂದಿಸದೆ ಇಡೀ ಬಿಲ್ ಗೊಂದಲಮಯವಾಗಿರುವ ಬಗ್ಗೆ, ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಆಗ ಶಿರಸ್ತೇದಾರ್ ರಂಗಧಾಮಯ್ಯ ಆಗಮಿಸಿದರು. ಗೋದಾಮಿನಲ್ಲೆ ತೂಕದ ಯಂತ್ರ ಇರುವಾಗ ಇಲ್ಲಿ ಯಾಕೆ ತಂದು ತೂಗುತ್ತಿರಾ ಎಂದು ಕರವೇ ಅಧ್ಯಕ್ಷ ಮಂಜುನಾಥ್ ಪ್ರಸ್ನಿಸಿದರು.
ಆಗ ಶಿರಸ್ತೇದಾರ್ ತೂಕದ ಯಂತ್ರ ಕೆಟ್ಟಿದೆ ಎಂದರೆ, ವ್ಯವಸ್ಥಾಪಕರು ಅದು ಕೇವಲ ಅಲ್ಪಪ್ರಮಾಣ ಮಾತ್ರ ತೂಗುತ್ತದೆ. ಹಾಗಾಗಿ, ಇಲ್ಲಿಗೆ ತೂಕಕ್ಕೆ ಬರಲಾಗುತ್ತಿದೆ ಎಂದು ಗೊಂದಲಮಯ ಉತ್ತರ ನೀಡಿದರು.  ಇಬ್ಬರು ಅಧಿಕಾರಿಗಳನ್ನು ನಾಗರಿಕರು, ಕರವೇ ಪದಾಧಿಕಾರಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾಗರಿಕರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ ವ್ಯವಸ್ಥಾಪಕ ಕೆಂಚಣ್ಣ, ಗೋದಾಮಿನಲ್ಲೆ ತೂಕಹಾಕಿ ಕಳಿಸಬೇಕಿದೆ. ಆದರೆ, ಅಲ್ಲಿ ತೂಕ ಸಮರ್ಪಕವಾಗಿ ಹಾಕದೆ ಇಲ್ಲಿಗೆ ತಂದು ಹಾಕುವ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶವಿದೆ. ಅಂದಾಜು ಪರಿಣಾಮದ ಮೇಲೆ ವಾಹನದಲ್ಲಿ ಹಾಕಿ ಕಳಿಸುತ್ತೇವೆ. ಹೆಚ್ಚು ಕಡಿಮೆ ಇದ್ದಲ್ಲಿ ಅಡ್ಜಸ್ಟ್ ಮಾಡಿಕೊಡುತ್ತೇವೆ ಎಂದರು. ಆಗ ಇಡೀ ಸಾಗಣೆ ವ್ಯವಸ್ಥೆಯೆ ಅನುಮಾನಾಸ್ಪದವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶಿರಸ್ತೇದಾರ್ ಸಧ್ಯಕ್ಕೆ ಯಾವುದೇ ಅಕ್ರಮವಾಗಿಲ್ಲ. ಆದರೂ, ತೂಕ ಹಾಕುವ ಬಗ್ಗೆ ಕೆಲವೊಂದು ಗೊಂದಲ ವಾಗಿದೆ. ಸರಿಪಡಿಸುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು. ಇಡೀ ಸಾಗಣೆ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕರವೇ ಅಧ್ಯಕ್ಷ ಮಂಜುನಾಥ್, ಪುರಸಭೆ ಸದಸ್ಯ ಸತೀಶ್, ಪ್ರಮುಖರಾದ ಕಾಂತ, ರಾಜು, ಗುರುಪ್ರಸಾದ್ ಇತರರು ಈ ಬಗ್ಗೆ ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಿ ಬಡವರಿಗಾಗಿ ಸರ್ಕಾರ ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿರುವ ಆಹಾರ ಧಾನ್ಯದ ಸಾಗಣೆ ಗೋಲ್‌ಮಾಲ್ ಅಕ್ರಮದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement