ಭವ್ಯ ಭಾರತ ಕಟ್ಟಲು ಕಂಕಣ ಬದ್ಧರಾಗಿ
ಪಾವಗಡ: ಸೇವಾ ಮನೋಭಾವ ಸೇರಿದಂತೆ ದೇಶ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಭವ್ಯ ಭಾರತ ಕಟ್ಟಲು ಕಂಕಣ ಬದ್ಧರಾಗುವಂತೆ ಶಾಸಕ ಕೆ.ಎಂ. ತಿಮ್ಮರಾಯಪ್ಪ ಯುವಕರಿಗೆ ಕರೆ ನೀಡಿದರು.
ತಾ. ಆಡಳಿತ ವತಿಯಿಂದ ಪಟ್ಟಣದ ಪ್ರಾಥಮಿಕ ಶಾಲೆ ಅವರಣದಲ್ಲಿ ಹಮ್ಮಿಕೊಂಡಿದ್ದ 67ನೇ ಸ್ವಾತಂತ್ಯ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯುವಕರು ಹಾಗೂ ವಿದ್ಯಾರ್ಥಿಗಳು ಬಡ ಹಾಗೂ ನಿರ್ಗತಿಕರ ಪರ ಧ್ವನಿ ಎತ್ತಿ ವ ಮೂಲಕ ಅಭಿವೃದ್ಧಿ ಸೇವಾ ಮನೋಭಾವ ರೂಢಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕಿದೆ. ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿದೆ ಎಂದ ಅವರು ವಿದ್ಯಾರ್ಥಿಗಳು ಹಾಗೂ ಯುವಕರು ದೇಶ ಪ್ರೇಮ ಬೆಳೆಸಿಕೊಂಡು ದೇಶ ರಕ್ಷಣೆಗೆ ಸೈನಿಕರಾಗಿ ಮುನ್ನುಗ್ಗುವಂತೆ ಸಲಹೆ ನೀಡಿದರು.
ಸ್ವಾತಂತ್ಯ್ರ ಬಂದು 67 ವರ್ಷ ಕಳೆದರೂ ದೇಶದಲ್ಲಿ ಅನಕ್ಷರತೆ, ಬಡತನ, ಆರಾಜಕತೆ ತಾಂಡವಾಡುತ್ತಿದೆ.
ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತುವ ಮೂಲಕ ದೇಶವನ್ನು ಪ್ರಗತಿ ಫಥದಲ್ಲಿ ಕೊಂಡೊಯ್ಯಬೇಕು. 200 ವರ್ಷಗಳ ಕಾಲ ಪರಕೀಯರ ಆಳ್ವಿಕೆಯಲ್ಲಿದ್ದ ನಮ್ಮ ದೇಶವನ್ನು ಪರಕೀಯರಿಂದ ಮುಕ್ತಗೊಳಿಸಲು ಮಹಾತ್ಮಗಾಂಧಿ ಸುಭಾಸ್‌ಚಂದ್ರ ಬೋಸ್ ಸೇರಿದಂತೆ ಅನೇಕ ಮಹಾನ್ ನಾಯಕರು ಸಿಪಾಯಿ ದಂಗೆ, ಉಪ್ಪಿನ ಸತ್ಯಾಗ್ರಹ ನಡೆಸುವ ಮೂಲಕ ತ್ಯಾಗ, ಬಲಿದಾನಗಳೊಂದಿಗೆ ಹೋರಾಡಿ ಸ್ವಾತಂತ್ಯ್ರ ಗಳಿಸಿಕೊಟ್ಟಿದ್ದಾರೆ. ರಾಷ್ಟ್ರಕ್ಕಾಗಿ ಹೋರಾಡಿದ ಪ್ರತಿಯೊಬ್ಬ ನಾಯಕರನ್ನು ನಾವು ನೆನಪಿಸುವ ಮೂಲಕ ನಿತ್ಯ ಅವರನ್ನು ಸ್ಮರಿಸಬೇಕಿದೆ ಎಂದರು.
ತ್ಯಾಗ, ಬಲಿದಾನ: ಹಲವಾರು ನಾಯಕರ ತ್ಯಾಗ ಬಲಿದಾನಗಳೊಂದಿಗೆ ಪಡೆದ ಸ್ವಾತಂತ್ರ್ಯವನ್ನು ಇಂದು ಕೆಲ ದುಷ್ಟ ಶಕ್ತಿಗಳು ದೇಶದಲ್ಲಿ ಅಭದ್ರತೆ ಸೃಷ್ಟಿಸಿ ಅತಿಕ್ರಮಣ ಮಾಡಲು ಹಾತೊರೆಯುತ್ತಿವೆ. ಪ್ರತಿಯೊಬ್ಬರು ಜಾಗೃತರಾಗುವ ಮೂಲಕ ದೇಶ ರಕ್ಷಿಸಬೇಕಿದೆ ಎಂದರು.
ತಾಪಂ ಇಒ ರಂಗನಾಥ್ ಮಾತನಾಡಿ ರೈತರು, ಇತಿಹಾಸಕಾರರು ಹಾಗೂ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ ಸ್ವಾತಂತ್ರ್ಯೋತ್ಸವದ ಬಗ್ಗೆ ವಿವರಿಸಿದರು. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದರು. ಧ್ವಜಾರೋಹಣವನ್ನು ತಾ.ದಂಡಾಧಿಕಾರಿ ಮಹಮ್ಮದ್ ಆಲ್ತಾಪ್ ಪಾಷ ನೆರೆವೇರಿಸಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ, ಜಿಪಂ ಸದಸ್ಯ ಆರ್.ಸಿ.ಅಂಜಿನಪ್ಪ, ಇತರರು ಮಾತನಾಡಿದರು. ತಾಪಂ ಅಧ್ಯಕ್ಷೆ ರಾಧ ರಾಜ್‌ಗೋಪಾಲ್, ಹಿರಿಯ ಮುಖಂಡರಾದ ಎಸ್.ವಿ.ಗೋವಿಂದಪ್ಪ, ಹಿರಿಯ ವಕೀಲ ಎಂ.ನಾಗೇಂದ್ರಪ್ಪ, ವೆಂಕಟರಾಮರೆಡ್ಡಿ, ಸತ್ಯಪ್ಪ, ಆರ್.ಟಿ. ಖಾನ್, ಪುರಸಭೆ ಸದಸ್ಯರಾದ ಮನು, ಸುಮ ಅನಿಲ್ ಮುಂತಾದವರು ಉಪಸ್ಥಿತರಿದ್ದರು.
ಬಿಇಒ ಬಿ.ಪಿ.ನಾಗರಾಜಪ್ಪ, ತಾ.ದೈಹಿಕ ಶಿಕ್ಷಣ ನಿರ್ದೇಶಕ ಸಣ್ಣಪ್ಪ ನಿರೂಪಿಸಿದರು.