ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗೆ ಏಕಾಗ್ರತೆ ಅವಶ್ಯ: ಗುರುಕುಲಶ್ರೀ

Vishwanath S
Updated On : 19 Aug 2013, 12:22 pm

ತಿಪಟೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಆದರ್ಶ, ಆರೋಗ್ಯ ಹಾಗೂ ಉತ್ಸಾಹ ಬೆಳೆಸಿಕೊಂಡು ಪೋಷಕರ ಆಶಯ ಈಡೇರಿಸಿ ಜೀವನದ ಗುರಿ ಮುಟ್ಟಬೇಕು. ಆ ಮೂಲಕ ಏಳಿಗೆಗೆ ಶ್ರಮಿಸಬೇಕೆಂದು ನಗರದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರಲ್ಲಿಯೂ ಆತ್ಮವಿರುತ್ತದೆ. ಆತ್ಮಕ್ಕೆ ಸಾವಿಲ್ಲ. ಆತ್ಮದಿಂದ ಸುಖ, ಶಾಂತಿ, ನೆಮ್ಮದಿ, ಜ್ಞಾನ ವೃದ್ಧಿ ಸಾಧ್ಯ. ಒಳ್ಳೆಯ ಆತ್ಮ ಹೊಂದಿದ್ದರೆ ಮಾತ್ರ ಮುಂದೆ ಉತ್ತಮ ಗುರಿ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಏಕಾಗ್ರೆತೆಯಿಂದ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ ಅಭ್ಯಾಸ ಮಾಡಿದರೆ ಮುಂದೆ ಉತ್ತಮ ಫಲ ದೊರೆಯುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ತಾಲೂಕಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ಉತ್ತಮ ಬೇಡಿಕೆ ಇದೆ. ವಿದ್ಯಾರ್ಥಿಗಳು ತಾತ್ಸಾರ ಮಾಡದೆ ಶ್ರದ್ಧೆಯಿಂದ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ಈ ಕಾಲೇಜಿಗೆ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳೇ ಹೆಚ್ಚಾಗಿರುವುದರಿಂದ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಆದಷ್ಟು ಬೇಗ ಇವುಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಹಕರಾದಿಂದ ಉತ್ತಮ ಬೋಧನೆಗೆ ಅವಕಾಶವಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಜಯದೇವಪ್ಪ, ವಿಶ್ವವಿದ್ಯಾನಿಲಯಗಳು ನೌಕರಿಯ ಜೊತೆಗೆ ಜೀವನದ ಮೌಲ್ಯಗಳನ್ನು ಹೇಳಿಕೊಡುವತ್ತ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಕಡಿಮೆ ಆಗುತ್ತಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಪದವಿ ತರಗತಿಗೆ ಪಠ್ಯಗಳನ್ನು ಸೇರಿಸಬೇಕು. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ವಿಶಾಲ ಸೋಮಶೇಖರ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕಾಲಹರಣ ಮಾಡದೆ ಓದುವ ಕಡೆ ಶ್ರದ್ಧೆ ವಹಿಸಿದರೆ ಮುಂದೆ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದರು.
ಪೋಷಕರ ಸಂಘದ ಅಧ್ಯಕ್ಷ ಬಿಲ್ಲೇಮನೆ ಚಂದ್ರಶೇಖರಯ್ಯ ಮಾತನಾಡಿ, ದೇಶದ ಸಂಪತ್ತು ಉಳ್ಳವರ ಪರವಾಗುತ್ತಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕೆಂದರು. ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಸುಜಿತ್ ಭೂಷಣ್, ಸಂಜೀವಯ್ಯ, ರಾಮದಾಸ್, ಬಿ.ಎನ್. ನಿಂಗಪ್ಪ, ಎಂ.ಧನಂಜಯ, ಎಸ್.ಎಂ. ಶಿವಪ್ರಸಾದ್ ಸೇರಿದಂತೆ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರಿದ್ದರು.
ವಿದ್ಯಾರ್ಥಿಗಳಾದ ಪ್ರಭಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಭೈರೇಶ್ ನಿರೂಪಿಸಿದರು. ಉಪನ್ಯಾಸಕರಾದ ಪ್ರೊ. ರಾಮಚಂದ್ರ ಸ್ವಾಗತಿಸಿ, ಪ್ರೊ.ಕುಮಾರಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement