ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವ್ಯಕ್ತಿ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ

Vishwanath S
Updated On : 19 Aug 2013, 12:23 pm

ಕ.ಪ್ರ.ವಾರ್ತೆ ,  ತುಮಕೂರು ,  ಆ. 18
ಅಕ್ರಮ ಮರಳು ಸಾಗಣೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಹಲ್ಲೆಗೊಳಗಾದ ವ್ಯಕ್ತಿಗೆ ಸೂಕ್ತ ಭದ್ರತೆ ಮತ್ತು ಪರಿಹಾರ ಒದಗಿಸಬೇಕೆಂದು ಮದಕರಿ ಸೇನೆಯ ಪದಾಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡರಾದ ರಾಜ್ಯ ಮದಕರಿ ಸೇನೆ ರಾಜ್ಯಾಧ್ಯಕ್ಷ ಸಿಂಗಾಪುರ  ವೆಂಕಟೇಶ್, ಪ್ರಗತಿಪರ ಚಳವಳಿ ಅಧ್ಯಕ್ಷ ಪಿ.ರಾಜಣ್ಣ, ಕರ್ನಾಟಕ ಮದಕರಿ ಸೇನೆಯ ಜಿಲ್ಲಾಧ್ಯಕ್ಷ ಎಸ್.ಕೆ. ರಾಜಣ್ಣ, ಉಪಾಧ್ಯಕ್ಷ ದಯಾನಂದ ಎಚ್.ಪಿ., ಪ್ರಗತಿಪರ ಚಳವಳಿಯ ಯುವರಾಜ್, ತಾ.ಪಂ. ಉಪಾಧ್ಯಕ್ಷ ಪ್ರಸನ್ನಕುಮಾರ್, ಶಿವಣ್ಣ ಮತ್ತಿತರರು, ಗ್ರಾಮದ ದೇವಾಲಯ ನಿರ್ಮಾಣಕ್ಕೆಂದು ಮೀಸಲಿರಿಸಿದ್ದ ಮರಳನ್ನು ಅಕ್ರಮವಾಗಿ ತುಂಬಿಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನು ಜನಾಂಗದ ಮುಖಂಡರಾದ ಪ್ರಸನ್ನ ಎಂಬುವವರು  ಪ್ರಶ್ನಿಸಿದ್ದಕ್ಕೆ ಅವರನ್ನು ಶಿರಾ ಪಟ್ಟಣಕ್ಕೆ ಕರೆಯಿಸಿ ಗುಂಪೊಂದು ಮನಬಂದಂತೆ ಥಳಿಸಿದೆ. ಪೊಲೀಸರು ಸಹ ಅಕ್ರಮ ಮರಳು ದಂಧೆ ನಡೆಸುತ್ತಿದ್ದವರ ಪರವಾಗಿ ನಿಂತು ಪ್ರತಿ ಕೇಸು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಶಿರಾ ತಾಲೂಕಿನ ಮುದಿಗೆರೆ ಕಾವಲ್ ತಾಂಡದ ಗ್ರಾಮಸ್ಥರು ಗ್ರಾಮದಲ್ಲಿ ಸೇವಾಲಾಲ್ ಹಾಗೂ ಅಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆಂದು ಒಂದಷ್ಟು ಮರಳು ಶೇಖರಿಸಿ ಇಟ್ಟುಕೊಂಡಿದ್ದು, ತಹಸೀಲ್ದಾರ್ ಹೇಳಿದ್ದಾರೆ ಎಂದು ಹೇಳಿ ಭೂವನಹಳ್ಳಿಯ ಶೀನಪ್ಪ ಅವರ ಮಗ ಸತ್ಯನಾರಾಯಣ, ರಂಗನಾಥಪ್ಪ ಅವರ ಮಗನಾದ ಜನಾರ್ಧನ ಅವರುಗಳು ಜೆಸಿಬಿ ಯಂತ್ರದ ಮೂಲಕ ಮರಳನ್ನು ಸಾಗಿಸಿದ್ದು, ಇದನ್ನು ಪ್ರಶ್ನಿಸಿದ ಪ್ರಸನ್ನಕುಮಾರ್ ಎಂಬುವವರನ್ನು ಶಿರಾ ನಗರಕ್ಕೆ ಕರೆಯಿಸಿಕೊಂಡು ಅವರ ಬಟ್ಟೆಗಳನ್ನು ಬಿಚ್ಚಿ ಮನಬಂದಂತೆ ಹಲ್ಲೆ ನಡೆಸಿ ಶಿರಾ ನಗರ ಠಾಣೆಯವರೆಗೆ ಎಳೆದುಕೊಂಡು ಹೋಗಿದ್ದಾರೆ. ಇದು ಅಕ್ಷಮ್ಯ ಅಪರಾಧ ಕೂಡಲೇ ಹಲ್ಲೆ ಮಾಡಿದ ಪ್ರಮುಖರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಹಲ್ಲೆಗೆ ಒಳಗಾದ ಪ್ರಸನ್ನಕುಮಾರ್ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಆರೋಪಿಗಳು ಕುಳಿತುಕೊಳ್ಳಲು ಅವಕಾಶ ನೀಡಿ ಇಡೀ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಪೊಲೀಸರ ಈ ವರ್ತನೆಯ ವಿರುದ್ಧ ಆ.19ರಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಮಂಡಳಿಗೆ ದೂರು ನೀಡಲಿದ್ದೇವೆ. ಸೂಕ್ತ ನ್ಯಾಯ ದೊರೆಯದಿದ್ದಲ್ಲಿ ಗೃಹ ಸಚಿವರ ಮನೆ ಮುಂದೆ ಧರಣಿ ನಡೆಸಲು ಹಿಂಜರಿಯುವುದಿಲ್ಲ ಎಂದು ಮುಖಂಡರು ತಿಳಿಸಿದರು.
ಪ್ರಸನ್ನಕುಮಾರ್ ಅಕ್ರಮ ಮರಳು ದಂಧೆ ನಡೆಸುತ್ತಾರೆ ಎಂದಾದರೆ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಿ, ಇಲ್ಲವೇ ಸಾಕ್ಷಿ  ಸಮೇತ ಅವರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಲಿ. ಅದನ್ನು ಬಿಟ್ಟು ಅವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಪ್ರಸನ್ನಕುಮಾರ್ ಮೇಲಿನ ಹಲ್ಲೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವಿರುವ ಶಂಕೆಯಿದೆ. ಕೂಡಲೇ ಜಿಲ್ಲಾಡಳಿತ ಸೂಕ್ತ ತನಿಖೆ ಕೈಗೊಂಡು ಹಲ್ಲೆಗೆ ಒಳಗಾದವರಿಗೆ ನ್ಯಾಯ ದೊರಕಿಸಬೇಕು. ಅಕ್ರಮವಾಗಿ ತೆಗೆದುಕೊಂಡು ಹೋಗಿರುವ ಮರಳು ವಾಪಸ್ ನೀಡಬೇಕು. ಇಲ್ಲದಿದ್ದಲ್ಲಿ ಮದಕರಿ ಸೇನೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಮುಖಂಡರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement