ಸಮರ್ಪಕ ಬೇಸಾಯ ಕ್ರಮದಿಂದ ಇಳುವರಿ ಪಡೆಯಿರಿ: ಅಶೋಕ್
ಕೊರಟಗೆರೆ: ತಾಲೂಕಿನಲ್ಲಿ ಜುಲೈನಲ್ಲಿ ಕಡಿಮೆ ಮಳೆ ಆಗಿರುವುದರಿಂದ ಬಿತ್ತನೆಗೆ ಕುಂಠಿತವಾಗಿದೆ. ಮಳೆ ಬರುವ ಕಾಲ ಆಧರಿಸಿ ರೈತರು ಸೂಕ್ತ ಬಿತ್ತನೆ ಮತ್ತು ಬೇಸಾಯ ಕ್ರಮ ಅನುಸರಿಸಿ ನಿಶ್ಚಿತ ಇಳುವರಿ ಪಡೆಯಲು ಕೊರಟಗೆರೆ ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್. ಅಶೋಕ್ ತಿಳಿಸಿದ್ದಾರೆ. ಆಗಸ್ಟ್ನಲ್ಲಿ ಮಳೆಯಾದಲ್ಲಿ ರಾಗಿಯಲ್ಲಿ ಅಲ್ಪಾವಧಿ ತಳಿಗಳಾದ ಜಿ.ಪಿ.ಯು- 28, ಜಿ.ಪಿ.ಯು- 16, ಎಂ,ಎಲ್- 365, ಪಿ.ಆರ್- 202, ತಳಿಗಳನ್ನು ಮತ್ತು ಆಗಸ್ಟ್ ಅಂತ್ಯದವರೆಗೆ ಜಿ.ಪಿ.ಯು- 26, ಜಿ.ಪಿ.ಯು- 45, ಜಿ.ಪಿ.ಯು-48 ನ್ನು ಬಿತ್ತನೆ ಮಾಡಬಹುದು, ರಾಗಿ ಸಸಿ ಮಡಿಗಳನ್ನು ಬೆಳೆಸಿದ್ದಲ್ಲಿ ನಾಟಿಗೆ ಉಪಯೋಗಿಸುವುದು ಉತ್ತಮ, ರಾಗಿ ಬಿತ್ತನೆಯಾಗಿದೆ. ಸರಿಯಾಗಿ ಹುಟ್ಟುವಳಿಯಾಗದಿದ್ದರೆ ರಾಗಿ ಪೈರನ್ನು ನಾಟಿ ಮಾಡುವುದು ಸೂಕ್ತ. ಸೂರ್ಯಕಾಂತಿ ಬೆಳೆಯನ್ನು ಆಗಸ್ಟ್ ಕೊನೆಯವರೆಗೆ ಬಿತ್ತನೆ ಮಾಡಬಹುದು. ಅಲ್ಪಾವಧಿ ತಳಿಗಳಾದ ಕೆ.ಬಿ.ಎಸ್.ಎಚ್-1, ಕೆಬಿಎಸ್ಎಚ್-41, ಕೆಬಿಎಸ್ಎಚ್-41, ಕೆಬಿಎಸ್ಎಚ್-42, ಕೆಬಿಎಸ್ಎಚ್-44 ತಳಿಗಳು ಬಿತ್ತನೆಗೆ ಸೂಕ್ತ. ಇದರೊಂದಿಗೆ ಅಲಸಂದೆ, ಸೋಯಾ ಅವರೆ, ಹುರುಳಿ, ಹುಚ್ಚೆಳ್ಳು, ನವಣೆ, ಸಾಮೆ ಮತ್ತು ಹೆಬ್ಬಾಳ ಅವರೆ ಬಿತ್ತನೆ ಮಾಡಬಹುದು. ತಪ್ಪಿದಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಜೋಳ ಬಿತ್ತನೆ ಮಾಡಬಹುದಾಗಿದೆ ಎಂದು ಸೂಚಿಸಿದ್ದಾರೆ. ಸೆಪ್ಪೆಂಬರ್ನಲ್ಲಿ ಮಳೆಯಾದರೆ ಜಿ.ಪಿ.ಯು-26, ಜಿ.ಪಿ.ಯು-45, ಜಿ.ಪಿ.ಯು-18, ಇಂಡಾಫ್-9, ಇಂಡಾಫ್-15 ತಳಿಗಳ ರಾಗಿ ಸಸಿ ಮಡಿ ತಯಾರಿಸಿದ್ದಲ್ಲಿ ಮೊದಲ ಪಾಕ್ಷಿಕದಲ್ಲಿ ರಾಗಿ ಸಸಿಗಳನ್ನು ಸಸಿ ಮಡಿಗಳಿಂದ ಕಿತ್ತು ನಾಟಿ ಕಾರ್ಯ ಪೂರ್ಣಗೊಳಿಸುವುದು. ಸೆ.15 ರೊಳಗೆ ಹಿಂಗಾರಿ ಜೋಳದ ಬಿತ್ತನೆಯನ್ನು ಪೂರ್ಣಗೊಳಿಸುವುದು ಸೂಕ್ತ. ಮುಸುಕಿನ ಜೋಳ ಬಿತ್ತನೆ ಮಾಡಬಹುದು, ಹಿಂದಿನ ವರ್ಷ ಬೂಜು ರೋಗ ತಗುಲಿದ್ದ ಪಕ್ಷದಲ್ಲಿ ಅಂತಹ ಪ್ರದೇಶದಲ್ಲಿ ಬಿತ್ತನೆ ಮಾಡಬಾರದು. ಅಲಸಂದೆ, ಹುರುಳಿ ಬಿತ್ತನೆ ಮತ್ತು ಸೂರ್ಯಕಾಂತಿ ಬೆಳೆಯ ಮಾರ್ಡೇನ್ ತಳಿಯನ್ನು ಬಿತ್ತನೆ ಮಾಡಬಹುದು. ತಾಲೂಕಿನ ರೈತರು ತಮ್ಮ ಜಮೀನುಗಳ ಮಣ್ಣು ಮಾದರಿ ಪರೀಕ್ಷೆಯ ಆಧಾರದ ಮೇಲೆ ಶಿಫಾರ್ಸಿನ ರಸಗೊಬ್ಬರ, ಸಾವಯವ ಗೊಬ್ಬರ ಬಳಸುವುದು, ಇತರೆ ಸಾವಯವ, ಕೊಳೆತ ವಸ್ತುಗಳು ಭೂಮಿ ಮೇಲೆ ಹರಡಿ ತೇವಾಂಶ ಸಂರಕ್ಷಿಸುವುದು. ತೇವಾಂಶದ ಕೊರತೆಯಿಂದ ಬೆಳೆಹಾಳಾದಲ್ಲಿ ಮೇವಿನ ಜೋಳದ ಬೆಳೆಯನ್ನು ಪೂರ್ಣ ಬೆಳೆಯಾಗಿ ಬೆಳೆಯಲು ಮುಂದಾಗಬಹುದು, ಮಳೆ ಬಂದಲ್ಲಿ ಖುಷ್ಕಿ ಬೆಳೆಗಳಿಗೂ ಕೂಡ ಮೇಲುಗೊಬ್ಬರ ಕೊಡುವುದು, ಯೂರಿಯಾ ಗೊಬ್ಬರದ ಸಿಂಪರಣೆ ಕೈಗೊಳ್ಳುವುದು ಸೂಕ್ತ, ಇಳಿಜಾರಿಗೆ ಅಡ್ಡಲಾಗಿ ಬಿತ್ತನೆಯಾದ ಪ್ರದೇಶದಲ್ಲಿ 10 ರಿಂದ 12 ಅಡಿಗಳಿ ಗೊಂದರಂತೆ ದೋಣಿ ಸಾಲು ತೆಗೆಯುವುದು, ಕೃಷಿ ತಜ್ಞಾರು ಶಿಫಾರ್ಸು ಮಾಡಿರುವ ಯೂರಿಯಾ ರಸಗೊಬ್ಬರಕ್ಕಿಂತ ಹೆಚ್ಚಿಗೆ ಉಪಯೋಗಿಸಬಾರದು. ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ.